ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಕ್ಕೆ ಅತಿದೊಡ್ಡ ವೈಮಾನಿಕ ದಾಳಿಯ ಬೆದರಿಕೆ ಹಾಕಿದರೇ ? ಸತ್ಯ ಪರಿಶೀಲನೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಕ್ಕೆ ಅತಿದೊಡ್ಡ ವೈಮಾನಿಕ ದಾಳಿಯ ಬೆದರಿಕೆ ಹಾಕಿದರೇ ? ಸತ್ಯ ಪರಿಶೀಲನೆ

ಹೇಳಿಕೆ/Claim: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಮೆರಿಕಕ್ಕೆ 48 ಗಂಟೆಗಳ ಗಡುವನ್ನು ನೀಡಿ, ಇಲ್ಲದಿದ್ದರೆ ವೈಮಾನಿಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಅಧ್ಯಕ್ಷ ಪುಟಿನ್ ರವರು ಅಮೆರಿಕಕ್ಕೆ 48 ಗಂಟೆಗಳ ಗಡುವನ್ನು ನೀಡಿದ್ದಾರೆ ಅಥವಾ ವೈಮಾನಿಕ ದಾಳಿಯ ಬೆದರಿಕೆ ಹಾಕಿದ್ದಾರೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಸಾಕ್ಷ್ಯಗಳಿಲ್ಲ. ಈ ಹೇಳಿಕೆಗೆ ಸಂಬಂಧಿಸಿದ ವೀಡಿಯೊದಲ್ಲಿ ಕಾಣುವ ಯುದ್ಧ ವಿಮಾನಗಳ ದೃಶ್ಯಗಳು, 2013ರಲ್ಲಿ ದಕ್ಷಿಣ ಕೊರಿಯಾದ ಕುನ್ಸಾನ್ ವಾಯುನೆಲೆಯಲ್ಲಿ ನಡೆದ F-16 ಎಲಿಫೆಂಟ್ ವಾಕ್ ಕಾರ್ಯಕ್ರಮದ್ದಾಗಿವೆ.

ರೇಟಿಂಗ್/Rating: ಸುಳ್ಳು


ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಪ್ರತಿಪಾದಿಸಿದ್ದಾರೆ. ‘QTHESTORMM’ ಎಂಬ ದೃಢೀಕೃತ X ಬಳಕೆದಾರರು ಇಂತಹ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಅದರ ಶೀರ್ಷಿಕೆ ಹೀಗಿದೆ: “ಪ್ರಮುಖ ಎಚ್ಚರಿಕೆ: ರಷ್ಯಾದ ಅಧ್ಯಕ್ಷ ಪುಟಿನ್ ಅವರು ರಷ್ಯಾದ ಸರ್ಕಾರಿ ಮಾಧ್ಯಮದಲ್ಲಿ ಹೀಗೆ ಹೇಳಿದ್ದಾರೆ: “ಅಮೆರಿಕದ ಬಳಿ ಇರುವುದು ಕೇವಲ 48 ಗಂಟೆಗಳು ಮಾತ್ರ. ಇನ್ನು ಯಾವುದೇ ವಿಳಂಬವಿಲ್ಲ, ಯಾವುದೇ ಎಚ್ಚರಿಕೆಗಳಿಲ್ಲ. ಜಗತ್ತು ಕಂಡರಿಯದ ಅತಿ ದೊಡ್ಡ ವಾಯುದಾಳಿಯನ್ನು ನೀವು ನೋಡಲಿದ್ದೀರಿ. ಕೌಂಟ್‌ಡೌನ್ ಆರಂಭವಾಗಿದೆ.”

ಈ ಪೋಸ್ಟ್‌ನೊಂದಿಗೆ ಲಗತ್ತಿಸಲಾಗಿರುವ 58 ಕ್ಷಣಗಳ ವೀಡಿಯೊದಲ್ಲಿ ಸಾಲಾಗಿ ನಿಂತಿರುವ ವಿವಿಧ ಯುದ್ಧ ವಿಮಾನಗಳನ್ನು ಕಾಣಬಹುದು. ಈ ಪೋಸ್ಟ್ ಗೆ 3,47,000 ಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿದ್ದು, ಅದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಇದು ಸುಳ್ಳು ಎಂದು ಕಂಡುಕೊಂಡಿತು. ಅಧ್ಯಕ್ಷ ಪುಟಿನ್ ಅವರು ಅಮೆರಿಕಕ್ಕೆ ವಾಯುದಾಳಿಯ ಬೆದರಿಕೆ ಹಾಕಿ 48 ಗಂಟೆಗಳ ಗಡುವು ನೀಡಿದ್ದಾರೆ ಎಂಬ ಹೇಳಿಕೆಯನ್ನು ಸಮರ್ಥಿಸಲು ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಸಾಕ್ಷ್ಯಾಧಾರಗಳು ದೊರಕಿಲ್ಲ. ಈ ವೀಡಿಯೊದಲ್ಲಿ ಬಳಸಲಾದ ಯುದ್ಧ ವಿಮಾನಗಳ ದೃಶ್ಯಾವಳಿಯು, 2013ರಲ್ಲಿ ದಕ್ಷಿಣ ಕೊರಿಯಾದ ಕುನ್ಸಾನ್ ವಾಯುನೆಲೆಯಲ್ಲಿ ನಡೆದ F-16 ಎಲಿಫೆಂಟ್ ವಾಕ್ ಕಾರ್ಯಕ್ರಮದ್ದಾಗಿದೆ.

ಈ ದೃಶ್ಯದ ಮೂಲವನ್ನು ತಿಳಿಯಲು, ನಾವು ಮೊದಲು ವೀಡಿಯೊದ ಪ್ರಮುಖ ಫ್ರೇಮ್ ಗಳನ್ನು ಬಳಸಿ ರಿವರ್ಸ್ ಚಿತ್ರಾಧಾರಿತ ಹುಡುಕಾಟವನ್ನು ನಡೆಸಿದೆವು. ಇದರ ಫಲಿತಾಂಶಗಳಲ್ಲಿ ನಮಗೆ, 2013ರ ಫೆಬ್ರವರಿ 2ರಂದು ‘ಬ್ಯಾಟಲ್ ಫೀಲ್ಡ್ ಸೋರ್ಸಸ್’ ಎಂಬ ಯೂಟ್ಯೂಬ್ ವಾಹಿನಿಯು ಅಪ್‌ಲೋಡ್ ಮಾಡಿದ ಒಂದು ವೀಡಿಯೊ ದೊರಕಿತು. ಅದರ ಶೀರ್ಷಿಕೆ: “ಕುನ್ಸಾನ್ ವಾಯುನೆಲೆಯಲ್ಲಿ F-16 ಎಲಿಫೆಂಟ್ ವಾಕ್- ರನ್ವೇಯಲ್ಲಿ ಸಾಲುಗೈದ ಯುದ್ಧವಿಮಾನಗಳು”. ಕುನ್ಸಾನ್ ವಾಯುನೆಲೆಯು ದಕ್ಷಿಣ ಕೊರಿಯಾ ಪರ್ಯಾಯ ದ್ವೀಪದಲ್ಲಿದೆ ಮತ್ತು ಪುಟಿನ್ ಅವರು ಅಮೆರಿಕಕ್ಕೆ ನೀಡಿದ್ದಾರೆನ್ನಲಾಗಿರುವ ಬೆದರಿಕೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಡಿಜಿಟೈ ಇಂಡಿಯಾ ಗಮನಿಸಿತು.

ಹುಡುಕಾಟದ ಮತ್ತೊಂದು ಫಲಿತಾಂಶವು, 20 ಏಪ್ರಿಲ್ 2013ರಂದು ‘ಏರ್ ಸೋರ್ಸ್ ಮಿಲಿಟರಿ’ ಎಂಬ ಖಾತೆಯಿಂದ ಅಪ್‌ಲೋಡ್ ಮಾಡಲಾದ ಯೂಟ್ಯೂಬ್‌ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಅದರ ಶೀರ್ಷಿಕೆ: “ದಕ್ಷಿಣ ಕೊರಿಯಾದ ಕುನ್ಸಾನ್ ವಾಯುನೆಲೆಯಲ್ಲಿ ಬೃಹತ್ USAF F-16 ಎಲಿಫೆಂಟ್ ವಾಕ್”. ವೀಡಿಯೊದಲ್ಲಿ ‘F-16 ಫೈಟಿಂಗ್ ಫಾಲ್ಕನ್’ ಯುದ್ಧವಿಮಾನಗಳು ಕುನ್ಸಾನ್ ವಾಯುನೆಲೆಯ ರನ್‌ವೇ ಮೇಲೆ “ಎಲಿಫೆಂಟ್ ವಾಕ್” ರಚನೆಯಲ್ಲಿ ಸಾಗುವುದನ್ನು’ ಕಾಣಬಹುದು ಎಂದು ಈ ವೀಡಿಯೊದ ವಿವರಣೆಯು ಹೇಳುತ್ತದೆ.

ಇದರ ನಂತರ, ಹೆಚ್ಚಿನ ಮಾಹಿತಿಗಾಗಿ “ಪುಟಿನ್ ಅಮೆರಿಕಕ್ಕೆ 48 ಗಂಟೆಗಳ ಗಡುವು ನೀಡಿ ಬೆದರಿಕೆ ಹಾಕಿದ್ದಾರೆ” ಎಂಬ ಪದಗುಚ್ಛವನ್ನು ಬಳಸಿ ನಾವು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದೆವು. ಪುಟಿನ್ ಅವರ ಇತ್ತೀಚಿನ ಹೇಳಿಕೆಗಳನ್ನು ಪರಿಶೀಲಿಸಿದಾಗ, ಹೇಳಿಕೆಯಲ್ಲಿ ಕಾಣುವಂತಹ 48 ಗಂಟೆಗಳ ಗಡುವು ಅಥವಾ ಅಮೆರಿಕದ ಮೇಲೆ ವೈಮಾನಿಕ ದಾಳಿ ನಡೆಸುವ ಬೆದರಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಕಂಡುಬಂದಿಲ್ಲ. ರಷ್ಯಾದ ಸರ್ಕಾರಿ ಮಾಧ್ಯಮಗಳಲ್ಲಿ ಅಥವಾ ಯಾವುದೇ ಅಧಿಕೃತ ಮೂಲಗಳಲ್ಲಿ ಪುಟಿನ್ ಇಂತಹ ಹೇಳಿಕೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ.

ಸೆಪ್ಟೆಂಬರ್ 25, 2026ರಂದು ರಾಯಿಟರ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಉಕ್ರೇನ್ ಯುದ್ಧವನ್ನು ಇತ್ಯರ್ಥಪಡಿಸಲು ಇರುವ ಎಲ್ಲಾ ಪ್ರಸ್ತಾಪಗಳು ಇನ್ನೂ ಪರಿಗಣನೆಯಲ್ಲಿವೆ, ಆದರೆ ರಷ್ಯಾ ತನ್ನ ಸ್ವಂತ ಹಿತಾಸಕ್ತಿಗಳನ್ನು ಸಹ ಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದು ಪುಟಿನ್ ತಿಳಿಸಿದ್ದಾರೆ. ಉಕ್ರೇನ್ ನಡೆಸುತ್ತಿರುವ “ಪ್ರಚೋದನಕಾರಿ ದಾಳಿ”ಗಳಿಗಾಗಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಮತ್ತು ರಷ್ಯಾ ಇದಕ್ಕೆ ಪ್ರತಿಯಾಗಿ ಪ್ರತಿದಾಳಿಗಳನ್ನು ನಡೆಸುತ್ತದೆ ಎಂದೂ ಸಹ ಪುಟಿನ್ ಹೇಳಿದ್ದಾರೆ. ಪುಟಿನ್ ಅಮೆರಿಕದ ಮೇಲೆ ವೈಮಾನಿಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿರುವ ಮೂಲಗಳು ಡಿಜಿಟೈ ಇಂಡಿಯಾಗೆ ಕಂಡುಬಂದಿಲ್ಲ.

ಆದ್ದರಿಂದ, ಈ ಹೇಳಿಕೆಯು ಸುಳ್ಳಾಗಿದೆ.


ಇದನ್ನೂ ಓದಿ:

ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ

ಟೆಸ್ಲಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ದೆವ್ವಗಳನ್ನು ಸೆರೆಹಿಡಿದಿರುವುದನ್ನು ಈ ವೀಡಿಯೊದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.