ಇಸ್ರೇಲ್ ದೇಶವು ಎಲ್ಲಾ ಗಲ್ಫ್ ದೇಶಗಳನ್ನು ನಾಶಪಡಿಸುವ ಯೋಜನೆ ಹೊಂದಿದೆ ಎಂದು ಪ್ರಧಾನಿ ಮೋದಿಯವರು ನಿಜವಾಗಿಯೂ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಇಸ್ರೇಲ್ ದೇಶವು ಎಲ್ಲಾ ಗಲ್ಫ್ ದೇಶಗಳನ್ನು ನಾಶಪಡಿಸುವ ಯೋಜನೆ ಹೊಂದಿದೆ ಎಂದು ಪ್ರಧಾನಿ ಮೋದಿಯವರು ನಿಜವಾಗಿಯೂ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಸ್ರೇಲ್ ದೇಶವು ಗಲ್ಫ್ ದೇಶಗಳನ್ನು ನಾಶಪಡಿಸುವ ಯೋಜನೆ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ ಎನ್ನಲಾಗಿದೆ.

ಕಡೆನುಡಿ/Conclusion:ಈ ಹೇಳಿಕೆ ಸುಳ್ಳು. ವೀಡಿಯೊವನ್ನು ಡಿಜಿಟಲ್ ರೂಪವಾಗಿ ತಿರುಚಲಾಗಿದೆ ಮತ್ತು ಆಡಿಯೊವನ್ನು AI ಬಳಸಿ ಬದಲಾಯಿಸಿರುವಂತೆ ತೋರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೊದಲ್ಲಿ ತೋರಿಸಿರುವಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ..

ರೇಟಿಂಗ್/Rating:ಸುಳ್ಳು 


ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರು ಗಲ್ಫ್ ರಾಷ್ಟ್ರಗಳನ್ನು ಹೇಗೆ ನಾಶಪಡಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಿರುವಂತೆ ಬಿಂಬಿಸುವ ಒಂದು ವೀಡಿಯೊವನ್ನು ಹಲವಾರು ಸಾಮಾಜಿಕ ಮಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ‘sulQAR’ ಎಂಬ ದೃಢೀಕೃತ X ಬಳಕೆದಾರರು ಅಂತಹ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಅದರ ಶೀರ್ಷಿಕೆ ಹೀಗಿದೆ: “ಗಲ್ಫ್ ರಾಷ್ಟ್ರಗಳನ್ನು ಅಂತ್ಯಗೊಳಿಸಲು ಇಸ್ರೇಲ್ ಯೋಜಿಸುತ್ತಿದೆ ಎಂದು ಬೆಂಜಮಿನ್ ನೆತನ್ಯಾಹು ತಮ್ಮ ಬಳಿ ಹೇಳಿಕೊಂಡಿದ್ದನ್ನು ಭಾರತದ ಪ್ರಧಾನಿ ಒಪ್ಪಿಕೊಂಡಿದ್ದಾರೆ. ಇಲ್ಲಿ ಗುರಿ ಇರಾನ್ ಅಥವಾ ಇತರ ದೇಶಗಳಲ್ಲ ಎಂಬುದು ಸ್ಪಷ್ಟವಾಗಿದೆ…” ಈ ಪೋಸ್ಟ್‌ಗೆ ವೇದಿಕೆಯೊಂದರಿಂದ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತಿರುವ 50 ಕ್ಷಣಗಳ ವೀಡಿಯೊ ತುಣುಕನ್ನು ಸೇರಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ –

ಪ್ರಧಾನಿ ಮೋದಿಯವರು ಈ ಮುಂದಿನ ಹೇಳಿಕೆ (ಕನ್ನಡಕ್ಕೆ ಅನುವಾದಿಸಲಾಗಿದೆ) ನೀಡಿದ್ದಾರೆ ಎಂದು ಈ ವೀಡಿಯೊದಲ್ಲಿ ಆರೋಪಿಸಲಾಗಿದೆ: “ಜಗತ್ತೇ ನೋಡುತ್ತಿದೆ. ಜಗತ್ತು ಜಾಗತೀಕರಣವನ್ನು ಮರೆತಂತಿದೆ ಮತ್ತೀಗ ಪಾಕಿಸ್ತಾನ, ಟರ್ಕಿ ಹಾಗೂ ಸೌದಿ ಅರೇಬಿಯಾ ಒಂದಾಗಿವೆ. ನಾನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದಾಗ, ಪಾಕಿಸ್ತಾನ, ಟರ್ಕಿ ಮತ್ತು ಸೌದಿ ಅರೇಬಿಯಾ ಒಂದಾಗಲಿವೆ ಎಂದು ಅವರಲ್ಲಿ ಹೇಳಿದೆ. ಅವರು ನನ್ನ ಪ್ರಶ್ನೆಗೆ ಉತ್ತರಿಸುತ್ತಾ, ಗಲ್ಫ್ ರಾಷ್ಟ್ರಗಳು ಮತ್ತು ಇರಾನ್ ನಡುವೆ ಸಂಘರ್ಷವನ್ನು ಉಂಟುಮಾಡಿ, ಕೊನೆಗೆ ಅವೆಲ್ಲವೂ ನಾಶವಾಗುವಂತೆ ಮಾಡುವುದಾಗಿ ಅವರು ಹೇಳಿದರು. ನಾನು ಯೋಚಿಸಿದ್ದು ಸರಿಯೆಂದು ಸಾಬೀತಾಯಿತು ಮತ್ತು ಈಗ ಅವರು [ಮೈತ್ರಿಕೂಟ] ಇದರಿಂದ ಹೇಗೆ ಹೊರಬರಬೇಕೆಂದು ಚಿಂತಿಸುತ್ತಿದ್ದಾರೆ. ಇಂತಹ ಸಮಯದಲ್ಲಿ, ಕಳೆದ 10 ವರ್ಷಗಳಲ್ಲಿ ನಾವು ಆತ್ಮನಿರ್ಭರ ಭಾರತದ ಸ್ಫೂರ್ತಿಯನ್ನು ಎತ್ತಿಹಿಡಿಯದೆ ಮತ್ತು ಸರಿಯಾದ ಹಾದಿಯಲ್ಲಿ ಸಾಗದೆ ಇದ್ದಿದ್ದರೆ, ಇಂದು ಇಂತಹ ಸಮಸ್ಯೆಯನ್ನು ಎದುರಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ.”

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ದೃಶ್ಯಾವಳಿಯನ್ನು ಡಿಜಿಟಲ್ ಮಾಧ್ಯಮಗಳನ್ನು ಮೂಲಕ ಬದಲಾಯಿಸಲಾಗಿದೆ ಮತ್ತು ಇದರಲ್ಲಿರುವ ಧ್ವನಿಮುದ್ರೆಯನ್ನು AI ಬಳಸಿ ಸೃಷ್ಟಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ ಎಂದು ತೋರುತ್ತದೆ. ಈ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದು ಎಂದು ಆರೋಪಿಸಲಾದ ಹೇಳಿಕೆಗಳನ್ನು ಅವರು ನೀಡಿಲ್ಲ.

ಇದರ ಹಿನ್ನೆಲೆ ಗಮನಿಸುವುದಾದರೆ ಉಲ್ಲೇಖಿಸಲಾದ ಮೈತ್ರಿಯು ಪಾಕಿಸ್ತಾನ, ಟರ್ಕಿ ಮತ್ತು ಸೌದಿ ಅರೇಬಿಯಾ ನಡುವಿನ ಒಂದು ಹೊಸ ರಕ್ಷಣಾ ಒಪ್ಪಂದವಾಗಿದೆ. ‘ಈ ಮೂರು ದೇಶಗಳು ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, “ಈ ಮೂರು ದೇಶಗಳಲ್ಲಿ ಯಾವುದಾದರೂ ಒಂದರ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುವುದು.” ಎಂದು ಆಗಸ್ಟ್ 11, 2026ರಂದು ಪ್ರಕಟವಾದ ವರದಿಯೊಂದರಲ್ಲಿ ಅಲ್ ಜಜೀರಾ ಬರೆದಿದೆ.

ವಿವರಗಳು:

ವೀಡಿಯೊದ ಮೂಲವನ್ನು ತಿಳಿಯಲು ನಾವು ಮೊದಲು ಅದರ ವಿವಿಧ ಕೀಫ್ರೇಮ್ ಗಳ ಮೇಲೆ ರಿವರ್ಸ್ ಚಿತ್ರಾಧಾರಿತ ಹುಡುಕಾಟವನ್ನು ನಡೆಸಿದೆವು. ಈ ಹುಡುಕಾಟದ ಫಲಿತಾಂಶಗಳಲ್ಲಿ ನಮಗೆ 15 ಆಗಸ್ಟ್ 2026ರಂದು DWS ನ್ಯೂಸ್ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊವೊಂದು ದೊರಕಿತು. ಅದರ ಶೀರ್ಷಿಕೆ ಹೀಗಿದೆ: “ಸಂಪೂರ್ಣ ದೇಶವನ್ನುದ್ದೇಶಿಸಿದ ಭಾಷಣ: ಮೋದಿಯವರು ಐತಿಹಾಸಿಕ ಕೆಂಪು ಕೋಟೆಯಿಂದ ಪ್ರಭಾವಶಾಲಿ ಸ್ವಾಂತಂತ್ರೋತ್ಸವದ ಭಾಷಣವನ್ನು ನೀಡಿದರು | AC1F”. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅದೇ ಉಡುಪು ಮತ್ತು ಕೆಂಪು ಪೇಟಾ ಧರಿಸಿರುವುದನ್ನು ಹಾಗೂ ಅವರ ಹಿಂದೆ ಧ್ವಜಸ್ತಂಭವಿರುವುದನ್ನು ಕಾಣಬಹುದು.

ವಿವರಣೆಯ ಪ್ರಕಾರ, “2026ರ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದರು.” ಆದರೆ ಡಿಜಿಟೈ ಇಂಡಿಯಾಗೆ, ಆ ಹೇಳಿಕೆಯಲ್ಲಿ ಉಲ್ಲೇಖಿಸಲಾದ ಯಾವುದೇ ಮಾತುಗಳು ಕಂಡುಬರಲಿಲ್ಲ. ಸಂಪೂರ್ಣ ವೀಡಿಯೊದಲ್ಲಿ, ಪ್ರಧಾನಿ ಮೋದಿಯವರು ಭಾರತದ ಆರ್ಥಿಕತೆ ಮತ್ತು ಮೂಲಭೂತ ಸೌಕರ್ಯಗಳ ಬೆಳವಣಿಗೆ, ಸಪ್ತಧಾರಾ ಅಥವಾ ಏಳು ಶಕ್ತಿಗಳು, ಯುವ ಸಬಲೀಕರಣ, ಭದ್ರತೆಯ ವಿಷಯಗಳು ಮತ್ತಿತರ ವಿವಿಧ ಸಾಮಾಜಿಕ ಸುಧಾರಣೆಗಳ ಕುರಿತು ಮಾತನಾಡಿದ್ದರು.

ಹುಡುಕಾಟದ ಮತ್ತೊಂದು ಫಲಿತಾಂಶದಲ್ಲಿ ನಮಗೆ 15 ಆಗಸ್ಟ್, 2026ರಂದು HT ಇಂಡಿಯಾ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊ ದೊರಕಿತು. ಈ ವೀಡಿಯೊ ಕೂಡ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ಪ್ರಧಾನಿ ಮೋದಿಯವರು ನೀಡಿದ ಭಾಷಣವನ್ನು ಒಳಗೊಂಡಿದೆ ಮತ್ತು ಹೇಳಿಕೆಯಲ್ಲಿ ಉಲ್ಲೇಖಿಸಲಾದ ಯಾವುದೇ ನುಡಿಗಟ್ಟುಗಳನ್ನು ಇದು ಹೊಂದಿಲ್ಲ.

ಪ್ರಧಾನಿ ಮೋದಿಯವರ ಭಾಷಣದ ಅಧಿಕೃತ ಪ್ರತಿಲಿಪಿಯನ್ನು ಹುಡುಕಿದಾಗ, PIBಯು ಪೂರ್ಣ ಪ್ರತಿಲಿಪಿಯನ್ನು ಬಿಡುಗಡೆ ಮಾಡಿದೆ ಎಂಬುದು ನಮ್ಮ ಅರಿವಿದೆ ಬಂತು. ಪ್ರಧಾನಿ ಮೋದಿಯವರು ಪಾಕಿಸ್ತಾನದ ಬಗ್ಗೆ ಮಾತನಾಡಿದ್ದು ನಿಜ, ಆದರೆ ಸೌದಿ ಅರೇಬಿಯಾ ಮತ್ತು ಟರ್ಕಿಯೊಂದಿಗಿನ ಮೈತ್ರಿಯ ಕುರಿತಾಗಿ ಅಲ್ಲ. ಬದಲಾಗಿ, ಅವರು ಆಪರೇಷನ್ ಸಿಂಧೂರ್ ಬಗ್ಗೆ ಮತ್ತು ಪಾಕಿಸ್ತಾನವು “ಇನ್ನೂ ನಿದ್ರಾಹೀನವಾಗಿದೆ” ಎಂಬುದರ ಬಗ್ಗೆ ಮಾತನಾಡಿದ್ದರು. ಮತ್ತೊಂದು ಕ್ಷಣದಲ್ಲಿ, ಪಾಕಿಸ್ತಾನವು ವಿವಿಧ ಮಿಲಿಟರಿ ತಂತ್ರಜ್ಞಾನಗಳೊಂದಿಗೆ ಭಾರತದ ಮೇಲೆ ದಾಳಿ ಮಾಡಿತು, ಆದರೂ ಭಾರತ ಅವೆಲ್ಲವನ್ನೂ ತಡೆದುಕೊಳ್ಳಲು ಮತ್ತು ಪ್ರತೀಕಾರ ತೀರಿಸಿಕೊಳ್ಳಲು ಸಾಧ್ಯವಾಯಿತು ಎಂಬುದರ ಬಗ್ಗೆ ಮಾತನಾಡಿದರು.

ಈ ನಿರ್ದಿಷ್ಟ ಭಾಗಗಳ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಬಹುದು-

ಭಾರತದ ಪ್ರಧಾನ ಮಂತ್ರಿಯವರ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮತ್ತೊಂದು ಸುದ್ದಿಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಹಲವು ಅಂಶಗಳ ಕುರಿತು ಬರೆಯಲಾಗಿದೆ.

ಕೊನೆಯದಾಗಿ, ನಾವು ಅಧಿಕೃತ ಸ್ಪಷ್ಟನೆಗಾಗಿ ಹುಡುಕಿದಾಗ, PIB ಈ ಹೇಳಿಕೆಯನ್ನು ಅಲ್ಲಗಳೆದಿರುವ X ಪೋಸ್ಟ್ ನಮಗೆ ದೊರೆಯಿತು. ಆ ಪೋಸ್ಟ್‌ನಲ್ಲಿ, “ಈ ವಿಡಿಯೋ ನಕಲಿಯಾಗಿದ್ದು, ಇದನ್ನು ಡಿಜಿಟಲ್ ವಿಧಾನದ ಮೂಲಕ ಬದಲಾಯಿಸಲಾಗಿದೆ… ಪ್ರಧಾನ ಮಂತ್ರಿಯವರು… ತಮ್ಮ ಭಾಷಣದಲ್ಲಿ ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಆದ್ದರಿಂದ, ಈ ಹೇಳಿಕೆಯು ಸುಳ್ಳಾಗಿದೆ.


ಇದನ್ನೂ ಓದಿ:

ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ

ಟೆಸ್ಲಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ದೆವ್ವಗಳನ್ನು ಸೆರೆಹಿಡಿದಿರುವುದನ್ನು ಈ ವೀಡಿಯೊದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.