ಭಾರತದಲ್ಲಿ ನಡೆದ BRICS ಶೃಂಗಸಭೆಯ ಸಮಯದಲ್ಲಿ ಕ್ಸಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ನಿಜವಾಗಿಯೂ ಪ್ಯಾನ್‌ಕೇಕ್‌ಗಳನ್ನು ತಯಾರಿಸಿದರೇ? ಸತ್ಯ ಪರಿಶೀಲನೆ

ಭಾರತದಲ್ಲಿ ನಡೆದ BRICS ಶೃಂಗಸಭೆಯ ಸಮಯದಲ್ಲಿ ಕ್ಸಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ನಿಜವಾಗಿಯೂ ಪ್ಯಾನ್‌ಕೇಕ್‌ಗಳನ್ನು ತಯಾರಿಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದಲ್ಲಿ ನಡೆದ 18ನೇ BRICS ಶೃಂಗಸಭೆಯ ಸಮಯದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಟ್ಟಾಗಿ ಪ್ಯಾನ್‌ಕೇಕ್‌ಗಳನ್ನು ತಯಾರಿಸಿದರು.

ಕಡೆನುಡಿ/Conclusion:ಈ ಹೇಳಿಕೆ ಸುಳ್ಳು. ವಾಸ್ತವವಾಗಿ ಈ ವಿಡಿಯೋದಲ್ಲಿ ಸೆಪ್ಟೆಂಬರ್ 2018ರಲ್ಲಿ ವ್ಲಾಡಿವೋಸ್ಟೊಕ್ ನಲ್ಲಿ ನಡೆದ ಈಸ್ಟರ್ನ್ ಎಕನಾಮಿಕ್ ಫೋರಮ್ ಸಂದರ್ಭದಲ್ಲಿ ಪುಟಿನ್ ಮತ್ತು ಕ್ಸಿ ಅವರು ಕ್ಯಾವಿಯರ್ (ಮೀನಿನ ಮೊಟ್ಟೆ) ಜೊತೆಗೆ ರಷ್ಯನ್ ಶೈಲಿಯ ಪ್ಯಾನ್‌ಕೇಕ್‌ಗಳನ್ನು ತಯಾರಿಸುತ್ತಿರುವುದನ್ನು ಕಾಣಬಹುದು, ಮತ್ತಿದು BRICS ಶೃಂಗಸಭೆಗೆ ಸಂಬಂಧಿಸಿದ್ದಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪುಟಿನ್ ಮತ್ತು ಕ್ಸಿ ಯವರೊಂದಿಗೆ ಚಹಾ ಸೇವಿಸಿದ್ದರೂ, ಆದರೆ ಅವರು ಪ್ಯಾನ್‌ಕೇಕ್‌ಗಳನ್ನು ತಯಾರಿಸಲಿಲ್ಲ.

ರೇಟಿಂಗ್/Rating: ಸುಳ್ಳು.


ಇತ್ತೀಚೆಗೆ ಭಾರತದಲ್ಲಿ ನಡೆದ BRICS ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಟ್ಟಿಗೆ ಅಡುಗೆ ಮಾಡಿದರು ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಫೇಸ್‌ಬುಕ್ ಬಳಕೆದಾರ ‘InKhabar’ ಅಂತಹ ವೀಡಿಯೊ ಕ್ಲಿಪ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ (ಕನ್ನಡಕ್ಕೆ ಅನುವಾದಿಸಲಾಗಿದೆ) ಹಂಚಿಕೊಂಡಿದ್ದಾರೆ: “ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತದಲ್ಲಿ ಒಟ್ಟಿಗೆ ಊಟ ಮಾಡಿದರು. BRICS ಶೃಂಗಸಭೆಯ ಸಂದರ್ಭದಲ್ಲಿ ಈ ಇಬ್ಬರು ನಾಯಕರ ನಡುವಿನ ಸ್ನೇಹವು ವಿಶೇಷ ರೀತಿಯಲ್ಲಿ ಕಂಡುಬಂದಿದೆ.” ವೀಡಿಯೊದಲ್ಲಿ ಈ ಇಬ್ಬರು ನಾಯಕರು ಒಟ್ಟಿಗೆ ಅಡುಗೆ ಮಾಡುವುದನ್ನು ತೋರಿಸಲಾಗಿದೆ, ಕ್ಲಿಪ್‌ನ ಮೇಲೆ ಹಿಂದಿ ಶೀರ್ಷಿಕೆಯನ್ನು ಇರಿಸಲಾಗಿದೆ, ಅದರ ಅನುವಾದ ಹೀಗಿದೆ: “BRICS ಶೃಂಗಸಭೆಯ ಸಮಯದಲ್ಲಿ ಪುಟಿನ್ ಮತ್ತು ಕ್ಸಿ ಯವರ ವಿಭಿನ್ನ ನೋಟ: ಅವರು ಒಟ್ಟುಗೂಡಿ ಅಡುಗೆ ಮಾಡಿದರು.” ಪೋಸ್ಟ್ ಅನ್ನು ಕೆಳಗೆ ನೋಡಿ –

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ದೃಶ್ಯಾವಳಿಗಳು ವಾಸ್ತವವಾಗಿ, ಸೆಪ್ಟೆಂಬರ್ 2018 ರಲ್ಲಿ ವ್ಲಾಡಿವೋಸ್ಟೊಕ್‌ನಲ್ಲಿ ನಡೆದ ಈಸ್ಟರ್ನ್ ಎಕನಾಮಿಕ್ ಫೋರಮ್ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕ್ಯಾವಿಯರ್‌ನೊಂದಿಗೆ ಸಾಂಪ್ರದಾಯಿಕ ರಷ್ಯಾದ ಪ್ಯಾನ್‌ಕೇಕ್‌ಗಳನ್ನು ತಯಾರಿಸುತ್ತಿರುವುದನ್ನು ತೋರಿಸುತ್ತವೆ. ಪ್ರಧಾನಿ ನರೇಂದ್ರ ಮೋದಿಯವರು 2026 ರ BRICS ಶೃಂಗಸಭೆಯ ಸಮಯದಲ್ಲಿ ಪುಟಿನ್ ಮತ್ತು ಕ್ಸಿ ಯವರನ್ನು ಚಹಾ ಸಮಯದಲ್ಲಿ ಭೇಟಿಯಾದದ್ದು ನಿಜವಾದರೂ, ಮೂವರು ನಾಯಕರು ಒಟ್ಟಿಗೆ ಪ್ಯಾನ್‌ಕೇಕ್‌ಗಳನ್ನು ತಯಾರಿಸಿದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ವಿವರಗಳು:

ವೀಡಿಯೊದ ಮೂಲದ ಬಗ್ಗೆ ತಿಳಿದುಕೊಳ್ಳಲು ನಾವು ಮೊದಲು ಅದರ ವಿವಿಧ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸೆಪ್ಟೆಂಬರ್ 12, 2018 ರಂದು 8 ವರ್ಷಗಳ ಹಿಂದೆ ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೊ ದೊರಕಿತು, ಅದರ ಶೀರ್ಷಿಕೆ: “ಪುಟಿನ್ ಚೀನಾದ ಕ್ಸಿ ಜಿನ್‌ಪಿಂಗ್‌ ರವರೊಂದಿಗೆ ಪ್ಯಾನ್‌ಕೇಕ್‌ಗಳನ್ನು ತಯಾರಿಸಿದ್ದು”

ಹುಡುಕಾಟದ ಮತ್ತೊಂದು ಫಲಿತಾಂಶದಲ್ಲಿ ನಮಗೆ ಸೆಪ್ಟೆಂಬರ್ 12, 2018ರಂದು ವಾಯ್ಸ್ ಆಫ್ ಅಮೇರಿಕಾ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊ ದೊರಕಿತು. ವೀಡಿಯೊದ ಶೀರ್ಷಿಕೆ ಹೀಗಿದೆ: “ಪುಟಿನ್ ಮತ್ತು ಕ್ಸಿ ಪ್ಯಾನ್‌ಕೇಕ್‌ಗಳನ್ನು ತಯಾರಿಸಿದರು | VOAನ್ಯೂಸ್” ಮತ್ತು ಅದರ ವಿವರಣೆಯು “ವ್ಲಾಡಿವೋಸ್ಟೊಕ್‌ನಲ್ಲಿ ಈಸ್ಟರ್ನ್ ಎಕನಾಮಿಕ್ ಫೋರಮ್ ನ ಸಮಯದಲ್ಲಿ” ಈ ಘಟನೆ ನಡೆಯಿತು ಎಂಬುದನ್ನು ಸೂಚಿಸುತ್ತದೆ.

ಈ ಮಾಹಿತಿಯನ್ನು ಬಳಸಿಕೊಂಡು, ನಾವು ಮುಂದೆ “ವ್ಲಾಡಿವೋಸ್ಟೊಕ್‌ನಲ್ಲಿ ಪುಟಿನ್ ಮತ್ತು ಕ್ಸಿ ಪ್ಯಾನ್‌ಕೇಕ್‌ಗಳನ್ನು ತಯಾರಿಸಿದರು” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು.

ಸೆಪ್ಟೆಂಬರ್ 12, 2018ರಂದು ಬಿಸ್ನೆಸ್ ಇನ್ಸೈಡರ್ ಪ್ರಕಟಿಸಿದ ವರದಿಯ ಪ್ರಕಾರ, “ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಸಭೆಗಳಿಂದ ವಿರಾಮ ಪಡೆದು ತಮ್ಮ ಅಡುಗೆ ಕೌಶಲ್ಯವನ್ನು ಪ್ರದರ್ಶಿಸಿದರು.” ವರದಿಯು, “ದೂರ ಪೂರ್ವದ ಬಂದರು ನಗರವಾದ ವ್ಲಾಡಿವೋಸ್ಟೊಕ್‌ನಲ್ಲಿ ನಡೆದ ಆರ್ಥಿಕ ವೇದಿಕೆಯೊಂದರಲ್ಲಿ ಭಾಗವಹಿಸುವ ಸಂದರ್ಭದಲ್ಲಿ” ಈ ಘಟನೆ ನಡೆಯಿತು ಎಂದೂ ಸಹ ತಿಳಿಸಿದೆ. ಅವರು ತಯಾರಿಸಿದ್ದು ಬ್ಲೀನಿ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ರಷ್ಯನ್ ಪ್ಯಾನ್‌ಕೇಕ್‌ಗಳಾಗಿದ್ದು, ಅವುಗಳ ಮೇಲೆ ‘ಕ್ಯಾವಿಯರ್’ (ಮೀನಿನ ಮೊಟ್ಟೆ) ಅನ್ನು ಬಳಸಲಾಗಿತ್ತು. ಈ ವರದಿಯ ಒಂದು ಭಾಗವನ್ನು ಕೆಳಗೆ ನೋಡಿ –

4ನೇ ಈಸ್ಟರ್ನ್ ಎಕನಾಮಿಕ್ ಫೋರಮ್ ಸೆಪ್ಟೆಂಬರ್ 11-13, 2018 ರವರೆಗೆ ವ್ಲಾಡಿವೋಸ್ಟೊಕ್‌ನಲ್ಲಿ ನಡೆಯಿತು. ದ ಮಾಸ್ಕೋ ಟೈಮ್ಸ್ ನ ಮತ್ತೊಂದು ವರದಿಯೂ ಸಹ ಈ ಬಗ್ಗೆ ಬರೆದಿದೆ, ರಷ್ಯಾದ ಪೂರ್ವೀಯ ನಗರವಾದ ವ್ಲಾಡಿವೋಸ್ಟೊಕ್‌ನಲ್ಲಿ 2018ರಲ್ಲಿ ಮಾತುಕತೆಗಳ ನಂತರ ಈ ಅಡುಗೆಯ ಕಾರ್ಯಕ್ರಮ ನಡೆಯಿತು ಎಂಬುದನ್ನು ಅದು ದೃಢಪಡಿಸಿದೆ.

ಭಾರತದಲ್ಲಿ ನಡೆದ 2026ರ BRICS ಶೃಂಗಸಭೆಯ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಟ್ಟಾಗಿ ಅಡುಗೆ ಮಾಡಿದರು ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಸಾಕ್ಷ್ಯಗಳು ಡಿಜಿಟೈ ಇಂಡಿಯಾ ತಂಡಕ್ಕೆ ಲಭ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಕ್ಸಿ ಮತ್ತು ಪುಟಿನ್ ರವರೊಂದಿಗೆ ಚಹಾ ಸೇವಿಸುತ್ತಿರುವುದು ಕಂಡುಬಂದಿದ್ದರೂ, ಈ ನಾಯಕರನ್ನೊಳಗೊಂಡ ಅಡುಗೆ ಕಾರ್ಯಕ್ರಮ ಅಥವಾ ಪ್ಯಾನ್‌ಕೇಕ್‌ಗಳ ತಯಾರಿಕೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲ.

ಆದ್ದರಿಂದ, ಈ ಹೇಳಿಕೆಯು ಸುಳ್ಳು.


ಇದನ್ನೂ ಓದಿ:

ಅರ್ಥ್ ಸಾಂಗ್ ಸಮಯದಲ್ಲಿ ಮೈಕೆಲ್ ಜಾಕ್ಸನ್ ಅವರ ಮೇಲೆ ಬಂದೂಕು ಇರಿಸಲಾಗಿತ್ತು ಎಂದು ನಿಜವಾಗಿಯೂ ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಫಿಫಾ ವಿಶ್ವಕಪ್‌ನಲ್ಲಿ ಇರಾನ್ ಬದಲಿಗೆ ಇಟಲಿಯನ್ನು ನೇಮಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಸೂಚಿಸಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.