ಇಸ್ರೇಲ್ ಪ್ರಧಾನಿ ನೆತನ್ಯಾಹು ರವರ ಮೇಲೆ ಸಂಸತ್ತಿನ ಸದಸ್ಯರು ಹಲ್ಲೆ ನಡೆಸುತ್ತಿರುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಇಸ್ರೇಲ್ ಪ್ರಧಾನಿ ನೆತನ್ಯಾಹು ರವರ ಮೇಲೆ ಸಂಸತ್ತಿನ ಸದಸ್ಯರು ಹಲ್ಲೆ ನಡೆಸುತ್ತಿರುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರನ್ನು ಇಸ್ರೇಲ್ ಸಂಸತ್ತಿನ ಸದಸ್ಯರು ಥಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಆರೋಪಿಸಲಾಗಿದೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ವೀಡಿಯೊ ವಾಸ್ತವವಾಗಿ ಜನವರಿ 2013 ರಲ್ಲಿ ಸೋಫಿಯಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಒಬ್ಬ ವ್ಯಕ್ತಿಯು ಬಲ್ಗೇರಿಯನ್ ರಾಜಕಾರಣಿ ಅಹ್ಮದ್ ಡೋಗನ್ ಅವರ ಮೇಲೆ ಗ್ಯಾಸ್ ಪಿಸ್ತೂಲ್‌ ಒಡ್ಡಿದ ಸಂದರ್ಭವನ್ನು ಚಿತ್ರಿಸುತ್ತದೆ. ಅಂತಹ ಒಂದು ಆಕ್ರಮಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದ್ದರು ಎಂದು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ.

ರೇಟಿಂಗ್/Rating: ಸುಳ್ಳು


ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಇಸ್ರೇಲಿ ಸಂಸತ್ತಿನ ಸದಸ್ಯರು ಥಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಹಲವು ಬಳಕೆದಾರರು ಪ್ರತಿಪಾದಿಸಿದ್ದಾರೆ. ಅಂತಹ ಒಂದು ಪೋಸ್ಟ್ ಅನ್ನು ‘NBT1776’ ಎಂಬ ದೃಢೀಕೃತ ‘X’ ಬಳಕೆದಾರರು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಬೆಂಜಮಿನ್ ನೆತನ್ಯಾಹು (@netanyahu) ಈ ವೀಡಿಯೊವನ್ನು ಅಂತರ್ಜಾಲ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಇದನ್ನು ‘ಸೂಕ್ಷ್ಮ ವಿಷಯ’ (Sensitive Content) ಎಂದು ಹೆಸರಿಸುತ್ತಿವೆ. ಮುಂದೆ ಏನು ಮಾಡಬೇಕೆಂದು ನಿಮಗೆ ತಿಳಿದಿದೆ ಅಲ್ಲವೇ? ಸ್ಕ್ರೀನ್‌ಶಾಟ್ ಕೆಳಗಿದೆ”. ಈ ಪೋಸ್ಟ್ ಒಂದು ವೀಡಿಯೊವನ್ನು ಒಳಗೊಂಡಿದ್ದು, ವೀಕ್ಷಕರು ಅದನ್ನು ಹಂಚಿಕೊಳ್ಳುವಂತೆ ಒತ್ತಾಯಿಸುತ್ತದೆ; ಈ ದೃಶ್ಯಾವಳಿಗಳು ನೆತನ್ಯಾಹು ರವರ ಮೇಲಿನ ದಾಳಿ ಅಥವಾ ಥಳಿತವನ್ನು ತೋರಿಸುತ್ತವೆ ಎಂದು ಇದು ಸೂಚಿಸುತ್ತದೆ. ಪೋಸ್ಟ್ ಅನ್ನು ಕೆಳಗೆ ನೋಡಿ –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ದೃಶ್ಯಾವಳಿಯು ಜನವರಿ 2013 ರಲ್ಲಿ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಘಟನೆಗೆ ಸಂಬಂಧಿಸಿರುವಂಥದ್ದು; ಆ ಘಟನೆಯಲ್ಲಿ ಪಕ್ಷದ ಸಮಾವೇಶವೊಂದರ ವೇಳೆ ಒಬ್ಬ ವ್ಯಕ್ತಿಯು ಬಲ್ಗೇರಿಯನ್ ರಾಜಕಾರಣಿ ಅಹ್ಮದ್ ಡೋಗನ್ ಅವರನ್ನು ಗ್ಯಾಸ್ ಪಿಸ್ತೂಲ್‌ನಿಂದ ಬೆದರಿಸಿದ್ದರು. ಈ ವೀಡಿಯೊಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರಿಗೂ ಯಾವುದೇ ಸಂಬಂಧವಿಲ್ಲ ಮತ್ತು ಅವರನ್ನು ಈ ಘಟನೆಯೊಂದಿಗೆ ಜೋಡಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ.

ವಿವರಗಳು:

ಮೊದಲನೆಯದಾಗಿ, ತಪ್ಪು ನಿರೂಪಣೆಯನ್ನು ಸೃಷ್ಟಿಸಲು ಈ ವೀಡಿಯೊವನ್ನು ತಿರುಚಲಾಗಿದೆ ಎಂಬುದಕ್ಕೆ ನಮಗೆ ಸ್ಪಷ್ಟ ಪುರಾವೆಗಳು ದೊರಕಿದವು. ವೀಡಿಯೊದ ಆರಂಭದಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಚಿತ್ರವನ್ನು ತೋರಿಸಲಾಗುತ್ತದೆ. ಆದರೆ, ಕೆಲವೇ ಕ್ಷಣಗಳಲ್ಲಿ, ವೀಡಿಯೊ ಹಠಾತ್ತನೆ ಸಂಘರ್ಷವೊಂದನ್ನು ತೋರಿಸುವ ಮತ್ತೊಂದು ದೃಶ್ಯಕ್ಕೆ ಬದಲಾಗುತ್ತದೆ. ವೀಡಿಯೊದ ಆರಂಭಿಕ ಕ್ಷಣಗಳಿಂದ ತೆಗೆದ ಕೆಳಗಿನ ಎರಡು ಸ್ಕ್ರೀನ್‌ಶಾಟ್‌ಗಳು ಈ ತಿರುಚುವಿಕೆಯನ್ನು ತೋರಿಸುತ್ತವೆ –

ಇದರ ನಂತರ, ವೀಡಿಯೊದ ಮೂಲವನ್ನು ಪತ್ತೆಹಚ್ಚಲು ನಾವು ಅದರಿಂದ ಕೆಲವು ಪ್ರಮುಖ ದೃಶ್ಯಗಳನ್ನು ಬಳಸಿಕೊಂಡು ರಿವರ್ಸ್ ಚಿತ್ರಾಧಾರಿತ ಹುಡುಕಾಟವನ್ನು ನಡೆಸಿದೆವು. ಈ ಹುಡುಕಾಟದ ಫಲಿತಾಂಶಗಳಲ್ಲಿ ನಮಗೆ ಜನವರಿ 19, 2013ರಂದು ಪ್ರಕಟವಾದ “НАПАДЕНИЕТО НАД АХМЕД ДОГАН” ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೊ ದೊರಕಿತು. ಇದರ ಕನ್ನಡದ ಅನುವಾದ ಹೀಗಿದೆ “ಅಹ್ಮದ್ ಡೋಗನ್ ಮೇಲಿನ ದಾಳಿ”.

ಮೂಲ ವೀಡಿಯೊದ ವಿವರಣೆಯಲ್ಲಿ ದಾಳಿಕೋರನನ್ನು 25 ವರ್ಷದ ಒಕ್ಟೇ ಎನಿಮೆಖ್ಮೆಡೋವ್ ಎಂದು ಗುರುತಿಸಲಾಗಿದೆ. ವೇದಿಕೆಯ ಮೇಲಿದ್ದ ಬರಹವೂ ಸೇರಿದಂತೆ ವೀಡಿಯೊದಲ್ಲಿನ ದೃಶ್ಯಗಳು ವೈರಲ್ ಆಗಿರುವ ಹೇಳಿಕೆಯಲ್ಲಿನ ದೃಶ್ಯಗಳಿಗೆ ಹೊಂದಿಕೆಯಾಗುತ್ತವೆ ಎಂಬುದು ನಮಗೆ ಕಂಡುಬಂತು. ಈ ಎರಡು ವೀಡಿಯೊಗಳ ಅಕ್ಕಪಕ್ಕದ ಹೋಲಿಕೆಯನ್ನು ಕೆಳಗೆ ನೀಡಲಾಗಿದೆ –

ಹುಡುಕಾಟದಲ್ಲಿ ದೊರಕಿದ ಮತ್ತೊಂದು ಫಲಿತಾಂಶವು ನಮ್ಮನ್ನು 20 ಜನವರಿ 2013 ರಂದು ABC ನ್ಯೂಸ್ ಪ್ರಕಟಿಸಿದ ಯೂಟ್ಯೂಬ್ ವೀಡಿಯೊಗೆ ಕರೆದೊಯ್ಯಿತು. ವೀಡಿಯೊದ ಶೀರ್ಷಿಕೆ ಹೀಗಿತ್ತು: “ಬಲ್ಗೇರಿಯಾದ ವಿರೋಧ ಪಕ್ಷದ ನಾಯಕರ ಹತ್ಯೆಯ ವಿಫಲ ಪ್ರಯತ್ನ”. ವೀಡಿಯೊದಲ್ಲಿರುವ ದೃಶ್ಯಗಳು ಹೇಳಿಕೆಯಲ್ಲಿರುವ ದೃಶ್ಯಗಳಿಗೆ ಹೊಂದಿಕೆಯಾಗುತ್ತವೆ; ಹೀಗಾಗಿ ಇದು 2013 ರಲ್ಲಿ ಅಹ್ಮದ್ ಡೋಗನ್ ರವರ ಮೇಲೆ ನಡೆದ ದಾಳಿಯ ದೃಶ್ಯಾವಳಿ ಎಂಬುದು ಮತ್ತು ಈ ದೃಶ್ಯಗಳಿಗೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಖಚಿತವಾಗುತ್ತದೆ.

ಕೊನೆಯದಾಗಿ, ಅಂತಿಮ ಖಚಿತತೆಗಾಗಿ, ನಾವು “ಅಹ್ಮದ್ ಡೋಗನ್ ಹತ್ಯೆಯ ಪ್ರಯತ್ನ” ಎಂಬ ಪದಗುಚ್ಛವನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದೆವು.

ಜನವರಿ 19, 2013ರಂದು ದ ಗಾರ್ಡಿಯನ್ ಪ್ರಕಟಿಸಿದ ವರದಿಯ ಪ್ರಕಾರ, “ಬಲ್ಗೇರಿಯಾದ ವಿರೋಧ ಪಕ್ಷದ ರಾಜಕಾರಣಿಯೊಬ್ಬರು ಕೂದಲೆಳೆ ಅಂತರದಲ್ಲಿ ಹತ್ಯೆಗೊಳ್ಳುವ ಅಪಾಯದಿಂದ ಪಾರಾದರು… ವ್ಯಕ್ತಿಯೊಬ್ಬನು ವೇದಿಕೆಯ ಮೇಲೆ ಅವರ ಸಮೀಪಕ್ಕೆ ಬಂದು, ಅತ್ಯಂತ ಹತ್ತಿರದಿಂದ ಅವರ ತಲೆಗೆ ಬಂದೂಕನ್ನು ಒಡ್ಡಿದನು.” ರಾಜಧಾನಿ ಸೋಫಿಯಾದಲ್ಲಿ ನಡೆದ ಪಕ್ಷದ ಅಧಿವೇಶನದ ವೇಳೆ, ಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಕೆಳಗೆ ಕೆಡವಿ ಹಿಡಿದಾಗ ಅಹ್ಮದ್ ಡೋಗನ್ ಯಾವುದೇ ಗಾಯಗಳಿಲ್ಲದೆ ಪಾರಾದರು ಎಂದು ಆ ವರದಿಯು ಮತ್ತಷ್ಟು ವಿವರಿಸುತ್ತದೆ.

ಆದ್ದರಿಂದ, ಈ ಹೇಳಿಕೆಯು ಸುಳ್ಳು.



ಇದನ್ನೂ ಓದಿ:

ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ

ಟೆಸ್ಲಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ದೆವ್ವಗಳನ್ನು ಸೆರೆಹಿಡಿದಿರುವುದನ್ನು ಈ ವೀಡಿಯೊದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.