ಈ ವೀಡಿಯೊ ಚೀನಾದ ಯಂತ್ರಗಳು ಸಾಗರದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊ ಚೀನಾದ ಯಂತ್ರಗಳು ಸಾಗರದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಚೀನಾದ ಯಂತ್ರಗಳು ಸಮುದ್ರ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇಗೆ ಸ್ವಚ್ಛಗೊಳಿಸುತ್ತಿವೆ ಎಂದು ವೀಡಿಯೊ ತೋರಿಸುತ್ತದೆ ಎನ್ನಲಾಗಿದೆ.

ಕಡೆನುಡಿ/Conclusion : ಈ ಹೇಳಿಕೆ ತಪ್ಪು ನಿರೂಪಣೆಯ ಪ್ರಕರಣವಾಗಿದೆ. ವೀಡಿಯೊ ವಾಸ್ತವವಾಗಿ ದ ‘ಓಶನ್ ಕ್ಲೀನಪ್’ ಸಂಸ್ಥೆ ಅಭಿವೃದ್ಧಿಪಡಿಸಿದ, ನಿಯೋಜಿಸಿದ ಮತ್ತು ನಿರ್ವಹಿಸುವ ಸಾಗರ ಶುದ್ಧೀಕರಣ ತಂತ್ರಜ್ಞಾನವನ್ನು ಚಿತ್ರಿಸುತ್ತದೆ. ಇದು ನೀದರ್‌ಲ್ಯಾಂಡ್ಸ್ ಮೂಲದ ಲಾಭರಹಿತ ಸಂಸ್ಥೆಯಾಗಿದೆ, ಇದು ಚೀನೀ ಯಂತ್ರ ಅಥವಾ ತಂತ್ರಜ್ಞಾನವಲ್ಲ.

ರೇಟಿಂಗ್/Rating : ತಪ್ಪು ನಿರೂಪಣೆ

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಸಾಮಾಜಿಕ ಮಾಧ್ಯಮ ಬಳಕೆದಾರರು ಚೀನಾದ ಯಂತ್ರಗಳು ಸಾಗರದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತಿವೆ ಎಂದು ಹೇಳಿಕೊಂಡಿದ್ದಾರೆ. “ಚೀನೀ ಯಂತ್ರವು ಸಮುದ್ರ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತದೆ!” ಎಂಬ ಶೀರ್ಷಿಕೆಯೊಂದಿಗೆ ದೃಢೀಕೃತ X ಬಳಕೆದಾರ ‘En_chinaNews’ ಅಂತಹ 48 ಕ್ಷಣಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಸಮುದ್ರದ ಪ್ಲಾಸ್ಟಿಕ್ ಅನ್ನು ಧಾರಣ ವಲಯದೊಳಗೆ (ರಿಟೆನ್ಷನ್ ಜೋನ್) ಸಂಗ್ರಹಿಸುವ ಹಡಗುಗಳು ದೊಡ್ಡ ತೇಲುವ ತಡೆಗೋಡೆ ವ್ಯವಸ್ಥೆಯನ್ನು ಎಳೆದೊಯ್ಯುವುದನ್ನು ತೋರಿಸುತ್ತದೆ. ಸಿಸ್ಟಮ್ 3, ಸಿಸ್ಟಮ್ 4 ಮತ್ತಿತರ ಸಿಸ್ಟಮ್ ವಲಯಗಳನ್ನು ನಕ್ಷೆಯಲ್ಲಿ ಹೇಗೆ ಗುರುತಿಸಲಾಗುತ್ತದೆ ಎಂಬುದನ್ನು ಈ ವೀಡಿಯೊ ತೋರಿಸುತ್ತದೆ. ಈ ಪೋಸ್ಟ್ ಗೆ 505,000ಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿವೆ, ಅದನ್ನು ಕೆಳಗೆ ನೋಡಬಹುದು –

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಇದು ತಪ್ಪು ನಿರೂಪಣೆಯ ಪ್ರಕರಣ ಎಂದು ಕಂಡುಕೊಂಡಿತು. ಈ ದೃಶ್ಯಾವಳಿಯು ನೆದರ್‌ಲ್ಯಾಂಡ್ಸ್ ಮೂಲದ ಲಾಭರಹಿತ ಸಂಸ್ಥೆಯಾದ ದ ಓಷನ್ ಕ್ಲೀನಪ್ ರಚಿಸಿದ, ನಿಯೋಜಿಸಿದ ಮತ್ತು ನಿರ್ವಹಿಸುವ ಸಾಗರ-ಸ್ವಚ್ಛಗೊಳಿಸುವಿಕೆ ವ್ಯವಸ್ಥೆಯನ್ನು ತೋರಿಸುತ್ತದೆ. ಇದು ಚೀನೀ ಯಂತ್ರ ಅಥವಾ ತಂತ್ರಜ್ಞಾನ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ.

ಮೂಲ ಪೋಸ್ಟ್ ಅನ್ನು ಪರಿಶೀಲಿಸಿದಾಗ, ಅದನ್ನು ಹೊಸ ಶೀರ್ಷಿಕೆಯೊಂದಿಗೆ ಮರುಪೋಸ್ಟ್ ಮಾಡಲಾಗಿದೆ ಎಂದು ನಮಗೆ ತಿಳಿದುಬಂತು, ಮೂಲ ವೀಡಿಯೊ ದ ಓಷನ್ ಕ್ಲೀನಪ್‌ ಸಂಸ್ಥೆಯಿಂದ ಬಂದಂಥದ್ದು. ಮೂಲ ಪೋಸ್ಟ್‌ಗೆ “ನಮ್ಮ ಯೋಜಿತ ಅಂದಾಜಿನ ಪ್ರಕಾರ, ಸಿಸ್ಟಮ್ 03 ಅನ್ನು ಆಧರಿಸಿದ ಹತ್ತು ವ್ಯವಸ್ಥೆಗಳನ್ನು ಬಳಸಿಕೊಂಡು ಸಂಪೂರ್ಣ ಗ್ರೇಟ್ ಪೆಸಿಫಿಕ್ ಕಸದ ಪ್ಯಾಚ್ (100,000,000 ಕೆಜಿ ಪ್ಲಾಸ್ಟಿಕ್ ಅನ್ನು ಒಳಗೊಂಡಿರುವಂಥದ್ದು) ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ ಎಂಬುದು ನಮ್ಮ ನಿರೀಕ್ಷೆ” ಎಂದು ಶೀರ್ಷಿಕೆ ನೀಡಲಾಗಿದೆ. ಇದನ್ನು ಸೆಪ್ಟೆಂಬರ್ 20, 2022 ರಂದು ಅಪ್‌ಲೋಡ್ ಮಾಡಲಾಗಿತ್ತು ಮತ್ತು ಇದು ಚೀನೀ ಯಂತ್ರ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಹೊಂದಿಲ್ಲ.

ಇದರ ನಂತರ, ನಾವು ವೀಡಿಯೊದ ವಿವಿಧ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ನಮಗೆ ಪೂರ್ಣ ದೃಶ್ಯಗಳು ದೊರಕಿದವು. ದ ಓಷನ್ ಕ್ಲೀನಪ್ ವಾಹಿನಿಯಲ್ಲಿ ಅಪ್‌ಲೋಡ್ ಮಾಡಲಾದ ಪೂರ್ಣ ಯೂಟ್ಯೂಬ್ ವೀಡಿಯೊದ ಶೀರ್ಷಿಕೆ: “ದ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ನ ಕೊನೆ | ದಿ ಓಷನ್ ಕ್ಲೀನಪ್”. ವಿವರಣೆಯಲ್ಲಿ ಅವರು “ ಈಗ ಸಂಪೂರ್ಣ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ಅನ್ನು ಶಾಶ್ವತವಾಗಿ ಸ್ವಚ್ಛಗೊಳಿಸಲು ನಮ್ಮ ಮೊದಲ ಪೂರ್ಣ ಪ್ರಮಾಣದ ಸಾಗರ ಶುಚಿಗೊಳಿಸುವ ವ್ಯವಸ್ಥೆಯಾದ ಸಿಸ್ಟಮ್ 03ಗೆ ತಿರುಗುತ್ತಿರುವುದಾಗಿ… ” ಹೇಳುತ್ತದೆ. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

ನಂತರ, ಪೋಸ್ಟ್‌ನಲ್ಲಿ ಹೇಳಲಾಗಿರುವಂತೆ ಚೀನೀ ಯಂತ್ರಗಳು ಅಥವಾ ತಂತ್ರಜ್ಞಾನದ ಕುರಿತು ಯಾವುದೇ ಮಾಹಿತಿ ಇದೆಯೇ ಎಂದು ಕಂಡುಹಿಡಿಯಲು ನಾವು ದಿ ಓಷನ್ ಕ್ಲೀನಪ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದೆವು. ಒಬ್ಬ ಡಚ್ ಎಂಜಿನಿಯರ್ ಬೋಯಾನ್ ಸ್ಲ್ಯಾಟ್ 2013ರಲ್ಲಿ ನೀದರ್‌ಲ್ಯಾಂಡ್ಸ್‌ನಲ್ಲಿ ದಿ ಓಷನ್ ಕ್ಲೀನಪ್ ಅನ್ನು ಸ್ಥಾಪಿಸಿದರು ಎಂದು ನಮಗೆ ತಿಳಿದುಬಂತು. ಬೋಯಾನ್ ನದಿ ಪ್ರತಿಬಂಧ ಮತ್ತು ದ ಗ್ರೇಟ್ ಪೆಸಿಫಿಕ್ ಗಾರ್ಬೆಜ್ ಪ್ಯಾಚ್‌ನ ಶುಚಿಗೊಳಿಸುವಿಕೆ ಎರಡಕ್ಕೂ “2021 ರಲ್ಲಿ ತಂತ್ರಜ್ಞಾನದ ಪುರಾವೆ” ಪಡೆದರು. ಸಂಪೂರ್ಣ ಅಭಿವೃದ್ಧಿ, ಪರೀಕ್ಷೆ ಮತ್ತು ಕಾರ್ಯಾಚರಣೆಗಳನ್ನು ತಮ್ಮ ಪ್ರಧಾನ ಕಛೇರಿ “ನೀದರ್‌ಲ್ಯಾಂಡ್ಸ್‌ನ ರೋಟರ್‌ಡ್ಯಾಮ್‌”ನಲ್ಲಿರುವ ಈ ಡಚ್ ಲಾಭರಹಿತ ಸಂಸ್ಥೆಯು ನಡೆಸುತ್ತದೆ, ಇದರಲ್ಲಿ ಚೀನಾದ ಪಾಲಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಸ್ಲ್ಯಾಟ್‌ನ ಕಥೆಯ ಒಂದು ಭಾಗವನ್ನು ಕೆಳಗೆ ನೋಡಿ-

ಸಿಸ್ಟಮ್ 03ರ ವಿಷಯದಲ್ಲಿ ನೋಡುವುದಾದರೆ, ಅಧಿಕೃತ ವೆಬ್‌ಸೈಟ್ ನಮಗೆ ಹೇಳುವಂತೆ ಇದು “ಸಾಗರದಿಂದ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವ ಸ್ವಚ್ಛಗೊಳಿಸುವಿಕೆ ವ್ಯವಸ್ಥೆಯಾಗಿದ್ದು, ಇದನ್ನು ದಿ ಓಷನ್ ಕ್ಲೀನಪ್ ವಿನ್ಯಾಸಗೊಳಿಸಿದೆ, ನಿಯೋಜಿಸಿದೆ ಮತ್ತು ನಿರ್ವಹಿಸುತ್ತಿದೆ.” ಇದನ್ನು ಆಗಸ್ಟ್ 2023ರಲ್ಲಿ ದ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್‌ಗೆ ನಿಯೋಜಿಸಲಾಯಿತು ಮತ್ತು ಅದನ್ನು ತೆಗೆದುಹಾಕಲು “ಮೇಲ್ವಿಚಾರಣಾ ಮಾಹಿತಿ ಮತ್ತು AI ಮಾಡೆಲಿಂಗ್ ಅನ್ನು ಬಳಸಿಕೊಂಡು ಹೆಚ್ಚಿನ ಸಾಂದ್ರತೆಯ ಪ್ಲಾಸ್ಟಿಕ್ ಇರುವ ಪ್ರದೇಶಗಳ ಕಡೆಗೆ ಅದನ್ನು ನಿರ್ದೇಶಿಸಲಾಗುತ್ತದೆ”. ಸಿಸ್ಟಮ್ 03ಯನ್ನು “GPGPಗೆ – ಮೇರ್ಸ್ಕ್ ಟೆಂಡರ್ ಮತ್ತು ಮೇರ್ಸ್ಕ್ ಟ್ರೇಡರ್ ಎಂಬ ಎರಡು ಹಡಗು”ಗಳ ಮೂಲಕ ಸಾಗಿಸಲಾಗುತ್ತದೆ ಮತ್ತು ಇದು “ಪ್ರಸ್ತುತ ಸುಮಾರು 2.2 ಕಿಲೋಮೀಟರ್ ಗರಿಷ್ಠ ಉದ್ದವನ್ನು ತಲುಪುತ್ತದೆ.” ಇದರ ಕುರಿತಾದ ಒಂದು ಭಾಗವನ್ನು ಕೆಳಗೆ ನೋಡಿ-

“ಸಾಗರ ಪ್ಲಾಸ್ಟಿಕ್ ಶುಚಿಗೊಳಿಸುವ ಚೀನೀ ಯಂತ್ರ” ಎಂದು ನಾವು ಅಂತರ್ಜಾಲ ಹುಡುಕಾಟಗಳನ್ನು ನಡೆಸಿದಾಗ ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ವೀಡಿಯೊಗೆ ಹೊಂದಿಕೆಯಾಗುವ ಯಾವುದೇ ಫಲಿತಾಂಶಗಳನ್ನು ಕಾಣಲಿಲ್ಲ. ಚೀನಾ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ “ಬ್ಲೂ ಸರ್ಕಲ್” ಕಾರ್ಯಕ್ರಮದಂತಹ ಪ್ರತ್ಯೇಕ ಉಪಕ್ರಮಗಳನ್ನು ಹೊಂದಿದೆ. ಆದರೆ, ಇವು ದಿ ಓಷನ್ ಕ್ಲೀನಪ್ ಕಂಪನಿಯ ಟೋವ್ಡ್-ಬ್ಯಾರಿಯರ್ ಸಾಗರ ಸ್ವಚ್ಛಗೊಳಿಸುವಿಕೆ ತಂತ್ರಜ್ಞಾನಕ್ಕೆ ಸಂಬಂಧಿಸಿಲ್ಲ.

ಹೀಗಾಗಿ, ಈ ಹೇಳಿಕೆ ತಪ್ಪು ನಿರೂಪಣೆಯೆಂಬುದು ತಿಳಿಯುತ್ತದೆ.

***********************************************************

ಇದನ್ನೂ ಓದಿ:

ರಿಷಿ ಸುನಾಕ್ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆ ನೀಡಿದರೇ? ಸತ್ಯ ಪರಿಶೀಲನೆ

ಈ ವೈರಲ್ ವೀಡಿಯೊ ನಿಜವಾಗಿಯೂ 2026ರಲ್ಲಿ ಹೊಸ ರೋಬೋಟಿಕ್ ಸಾರಿಗೆ ವಿಧಾನವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.