Don't Miss

ಸತ್ಯ ಪರಿಶೀಲನೆ: ಕೋಮುಗಳ ನಡುವಿನ ಜಗಳವೆಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ, ಸ್ಟಂಟ್ ತಂಡವೊಂದು ಮಾಡಿದ ಬೀದಿ ಕಾಳಗ.

Claim/ಹೇಳಿಕೆ: ಪ್ಯಾರಿಸ್‌ನಲ್ಲಿ ತಮಗೆ ಕಿರುಕುಳ ನೀಡುತ್ತಿದ್ದ ಪುರುಷರೊಂದಿಗೆ ಮಹಿಳೆಯರ ಗುಂಪೊಂದು ಸೆಣಸಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕೋಮುವಾದದ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ.

Conclusion/ಕಡೆನುಡಿ: ವೃತ್ತಿಪರವಾಗಿ ಸ್ಟಂಟ್‌ ಗಳನ್ನು ಮಾಡಲು ಜನರಿಗೆ ತರಬೇತಿ ನೀಡುವ ಫ್ರೆಂಚ್ ಸ್ಟಂಟ್ ಗುಂಪೊಂದು ಈ ವೀಡಿಯೊವನ್ನು ಮಾಡಿದೆ. ಈ ತಿಂಗಳ ಆರಂಭದಲ್ಲಿ ಆ ಗುಂಪು ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.

ರೇಟಿಂಗ್:ತಪ್ಪು ನಿರೂಪಣೆ 

ಸತ್ಯ ಪರಿಶೀಲನೆ ವಿವರಗಳು:

ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಲವಾರು ಗಂಡಸರೊಂದಿಗೆ  ಮಹಿಳೆಯರ ಗುಂಪೊಂದು ಹೋರಾಡುತ್ತಿರುವ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಘಟನೆಯು ಪ್ಯಾರಿಸ್‌ನಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. ವೀಡಿಯೊವನ್ನು ಕೋಮುವಾದದ ದ್ರಷ್ಟಿಯಿಂದ, ಇಸ್ಲಾಮ್ ಕುರಿತಾಗಿ ಭಯ ಹುಟ್ಟಿಸುವಂತಹ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಚಿತ್ರದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ,

ಈ ವಿಡಿಯೋ ಎಷ್ಟು ಸಮಾಧಾನಕರವಾಗಿದೆ. ನಿನ್ನೆ ಪ್ಯಾರಿಸ್‌ನಲ್ಲೆಲ್ಲೋ  ಮೆಟ್ರೋ ಅಂಡರ್‌ಪಾಸ್‌ನಲ್ಲಿ. ವಲಸಿಗರ ಒಂದು ಗುಂಪು ತಮ್ಮ ರೂಢಿಯ ಕೆಲಸವನ್ನು ಚೆನ್ನಾಗಿ ಮಾಡುತ್ತಿತ್ತು. ತಹರ್ರೂಶ್ (ಮಹಿಳೆಯರ ಮೇಲೆ ಸಾಮೂಹಿಕ ಕಿರುಕುಳ ಎಂಬುದು ಹತ್ತಿರದ ಅನುವಾದ). ಈ ವಲಸಿಗರ ದುರಾದೃಷ್ಟವೆಂದರೆ ಈ ಮೂವರು ಮಹಿಳೆಯರು ಫ್ರೆಂಚ್ ಪ್ಯಾರಾ-ಮಿಲಿಟರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದವರು.

ವೀಡಿಯೋವನ್ನು ವಾಟ್ಸಾಪ್‌ ಮತ್ತು X (ಈ ಹಿಂದೆ, ಟ್ವಿಟ್ಟರ್) ನಲ್ಲಿ ಬಹಳಷ್ಟು  ಹಂಚಿಕೊಳ್ಳಲಾಗುತ್ತಿದೆ.

ಅಂತಹುದೇ ಹೇಳಿಕೆಗಳೊಂದಿಗೆ ವೀಡಿಯೊವನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

 ಸತ್ಯ ಪರಿಶೀಲನೆ

ಈ ವೈರಲ್ ವೀಡಿಯೊದ ಸತ್ಯ ಪರಿಶೀಲನೆ ಮಾಡಲು ಡಿಜಿಟೈ ಇಂಡಿಯಾ ತಂಡಕ್ಕೆ ವಾಟ್ಸಾಪ್‌ನಲ್ಲಿ ವಿನಂತಿಯೊಂದು ಬಂತು. ನಮ್ಮ ತಂಡವು ವೀಡಿಯೊವನ್ನು ಹಲವು ಕೀಫ್ರೇಮ್‌ಗಳಾಗಿ ವಿಭಜಿಸಲು ವೀಡಿಯೊ ಪರಿಶೀಲನಾ ಟೂಲ್ ಆದ ಇನ್‌ವಿಡ್ ಅನ್ನು ಬಳಸಿತು. ಒಂದು ಕೀಫ್ರೇಮ್‌ನಲ್ಲಿ, ಪುರುಷರು ಕಪ್ಪು ಹೂಡಿಗಳನ್ನು ಧರಿಸಿರುವುದನ್ನು ನಾವು ಗಮನಿಸಿದೆವು. ಸ್ವೆಟ್‌ಶರ್ಟ್‌ನ ಹಿಂಭಾಗದಲ್ಲಿ ಬಿಳಿ ಅಕ್ಷರಗಳಲ್ಲಿ “CUC” ಎಂದು ಬರೆಯಲಾಗಿತ್ತು. ನಾವು ಈ ಸುಳಿವನ್ನು ಬಳಸಿ ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದೆವು.

ಫಲಿತಾಂಶಗಳಲ್ಲಿ ಒಂದು ನಮ್ಮನ್ನು ಕ್ಯಾಂಪಸ್-ಯೂನಿವರ್ಸ್‌ಕಾಸ್ಕೇಡ್ಸ್ ಇನ್ಸ್ಟಾಗ್ರಾಮ್ ಪುಟಕ್ಕೆ ಕರೆದೊಯ್ಯಿತು. ಅವರ ಲೋಗೋ ವೀಡಿಯೊದಲ್ಲಿರುವ  ಗಂಡಸರ ಹೂಡಿಗಳ ಮೇಲಿನ ಲೋಗೊದಂತೆಯೇ ಇತ್ತು. ಹೆಚ್ಚಿನ ವಿವರಗಳನ್ನು ತಿಳಿಯಲು ನಾವು ಅವರ ವೆಬ್‌ಸೈಟ್ ಅನ್ನು ನೋಡಿದೆವು. CUC ತಮ್ಮನ್ನು ತಾವು “ಸಿನಿಮಾ ಮತ್ತು ಪ್ರದರ್ಶನಗಳಲ್ಲಿನ ಸ್ಟಂಟ್ ತಂತ್ರಗಳಿಗೆ ಮೀಸಲಾಗಿರುವ ವೃತ್ತಿಪರ ತರಬೇತಿ ಕೇಂದ್ರ” ಎಂದು ವ್ಯಾಖ್ಯಾನಿಸಿಕೊಳ್ಳುತ್ತಾರೆ. “ವೃತ್ತಿಪರ ಸ್ಟಂಟ್‌ಮ್ಯಾನ್ ಗಳಾಗುವ ಉದ್ದೇಶವನ್ನು ಹೊಂದಿರುವ  ಪ್ರೇರಿತ ಕ್ರೀಡಾಪಟುಗಳು, ಪುರುಷರು ಮತ್ತು ಮಹಿಳೆಯರಿಗಾಗಿ ಈ ಕ್ಯಾಂಪಸ್ ಅನ್ನು ರಚಿಸಲಾಗಿದೆ” ಎಂದು ಅವರು ಸೇರಿಸುತ್ತಾರೆ. 2008 ರಲ್ಲಿ ಇದರ ಸ್ಥಾಪನೆಯಾಯಿತು ಮತ್ತಿದು ಫ್ರಾನ್ಸ್‌ನಲ್ಲಿ ನೆಲೆಗೊಂಡಿದೆ.

ನಾವು ಅವರ ಇನ್ಸ್ಟಾಗ್ರಾಮ್ ಪುಟವನ್ನು ನೋಡಿದಾಗ ನವೆಂಬರ್ 2, 2023ರಂದು ಪೋಸ್ಟ್ ಮಾಡಲಾದ ವೈರಲ್ ವೀಡಿಯೊ ನಮ್ಮ ಕಣ್ಣಿಗೆ ಬಿತ್ತು. ಅದಕ್ಕೆ “ಸ್ಟ್ರೀಟ್ ಫೈಟ್ ⚠️👊” ಎಂಬ ಶೀರ್ಷಿಕೆ ನೀಡಲಾಗಿತ್ತು ಮತ್ತು “cucteam, campuslife, street, fight, martialarts, video, stuntteam, fighter, campus , boxing, ko, combat, follow, martial, bagarre, action, cinema, choreography, cascadeuse, stuntlife” ಎಂಬ ಹ್ಯಾಶ್‌ಟ್ಯಾಗ್‌ ಗಳನ್ನೂ ವೀಡಿಯೊದ ವಿವರಣೆಯಲ್ಲಿ ಬಳಸಲಾಗಿತ್ತು.

ಪುಟದಲ್ಲಿನ ಇನ್ನಷ್ಟು ವೀಡಿಯೊಗಳನ್ನು ನೋಡಿದಾಗ ಅವರು ಸಿನಿಮಾ ಮತ್ತು ವೀಡಿಯೊಗಳಿಗಾಗಿ ಸ್ಟಂಟ್ ಮಾಡುವವರಿಗೆ ತರಬೇತಿ ನೀಡುವ ಗುಂಪು ಎಂದು ಬಹಿರಂಗವಾಯಿತು. ಹೀಗಾಗಿ ವೈರಲ್ ಆಗುತ್ತಿರುವ ಆರೋಪ ಸುಳ್ಳು.

ಇದನ್ನೂ ಓದಿ:

ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾಗಿದೆ