Don't Miss
Did Congress Manifesto mention about Inheritance Tax? Fact Check

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಭರವಸೆ ನೀಡಿದೆ.

ಕಡೆನುಡಿ/Conclusion:  ಸುಳ್ಳು. ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೊಳಿಸುವ ಯಾವುದೇ ಯೋಜನೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿಲ್ಲ. ಈ ತೆರಿಗೆಯ ಬಗ್ಗೆ ಓವರ್ಸೀಸ್ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದರು ಮತ್ತು ತಾವು ಅಮೆರಿಕದಲ್ಲಿ ತೆರಿಗೆ ವಿಧಿಸುವ ಉದಾಹರಣೆಯನ್ನು ನೀಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಇದು ಪಕ್ಷದ ನಿಲುವಲ್ಲ ಎಂದು ಕಾಂಗ್ರೆಸ್ ಪಕ್ಷ ತಳ್ಳಿ ಹಾಕಿದೆ.

ರೇಟಿಂಗ್: ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು:

ಲೋಕಸಭಾ ಚುನಾವಣಾ ಪ್ರಚಾರದ ಬಿಸಿಯೇರುತ್ತಿದ್ದಂತೆಯೇ, ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರವು  ಕಾಂಗ್ರೆಸ್ ಭರವಸೆ ನೀಡಿರುವ ಸಂಪತ್ತಿನ ಮರುಹಂಚಿಕೆಗೆ ಸಂಬಂಧಿಸಿದಂತೆ ವಿಚಿತ್ರ ತಿರುವು ಪಡೆದುಕೊಂಡಿದೆ. ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಅಧ್ಯಕ್ಷರಾದ ಸ್ಯಾಮ್ ಪಿತ್ರೋಡಾ ಸುದ್ದಿ ಸಂಸ್ಥೆಯಾದ ಎಎನ್ಐ ಗೆ  ನೀಡಿದ ಸಂದರ್ಶನದಲ್ಲಿ “ಯುಎಸ್‌ನಲ್ಲಿ ಸಂಪತ್ತಿನ ಮರುಹಂಚಿಕೆ” ಯನ್ನು ಉಲ್ಲೇಖಿಸಿದ್ದು ಚರ್ಚೆಯನ್ನು ಪ್ರಚೋದಿಸಿತು.

ಸಾಮಾನ್ಯವಾಗಿ, ಒಬ್ಬ ಮೃತ ವ್ಯಕ್ತಿಯ ವಾರಸುದಾರರಿಗೆ ವಿತರಿಸಬೇಕಾದ  ಆಸ್ತಿ/ಸಂಪತ್ತಿನ ಮೇಲೆ ಪಿತ್ರಾರ್ಜಿತ ತೆರಿಗೆಯನ್ನು ವಿಧಿಸಲಾಗುತ್ತದೆ. ಜಪಾನ್, ಯುಎಸ್ ಮತ್ತು ಫ್ರಾನ್ಸ್‌ನಂತಹ ಹಲವಾರು ದೇಶಗಳು ಇಂತಹ ತೆರಿಗೆಯನ್ನು ವಿಧಿಸುತ್ತವೆ.

ಆದರೆ, ಭಾರತದಲ್ಲಿ ಇಂತಹ ತೆರಿಗೆಯ ಕುರಿತು ಬೆಂಬಲಿಗರು ಮತ್ತು ವಿರೋಧಿಗಳ ಚರ್ಚೆಯು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿತು. ಹಲವಾರು ಮೀಮ್‌ಗಳು, ಸುದ್ದಿ ವರದಿಗಳು, ಟಿವಿ ಚರ್ಚೆಗಳು ಈ ವಿಷಯವನ್ನು ಪ್ರಸಾರ ಮಾಡಲಾರಂಭಿಸಿದ್ದರಿಂದ, ಇದು ಪ್ರತಿ ಸುದ್ದಿ ವಾಹಿನಿಯಲ್ಲಿ ಮುಖ್ಯಾಂಶವಾಗಿ ಮೂಡಿತು.

ಡಿಜಿಟೈ ಇಂಡಿಯಾದ ವಾಟ್ಸಾಪ್ ಟಿಪ್‌ಲೈನ್‌ನಲ್ಲಿ ಈ ಪ್ರಶ್ನೆ ಬಂದಾಗ, ನಾವು ಪರಿಶೀಲನೆ ಆರಂಭಿಸಿದೆವು ಹಾಗೂ ಇಲ್ಲಿ ಮತ್ತು ಇಲ್ಲಿ ವಿಷಯದ ಕುರಿತು ಕೆಲವು ಹೇಳಿಕೆಗಳನ್ನು ಕಂಡುಕೊಂಡೆವು.

FACT CHECK

ಮೊದಲಿಗೆ, ನಾವು ಕಾಂಗ್ರೆಸ್ ಪ್ರಣಾಳಿಕೆಯನ್ನು ಪರಿಶೀಲಿಸಿದೆವು ಆದರೆ ಕಾಂಗ್ರೆಸ್ ನ ನ್ಯಾಯ ಪತ್ರ ಎಂಬ ದಾಖಲೆಯಲ್ಲಿ ಪಿತ್ರಾರ್ಜಿತ ತೆರಿಗೆ ಅಥವಾ ಅಂತಹ ಯಾವುದೇ ಕ್ರಮದ ಬಗ್ಗೆ ಯಾವುದೇ ಉಲ್ಲೇಖ ಕಂಡುಬಂದಿಲ್ಲ. ‘ತೆರಿಗೆ ಮತ್ತು ತೆರಿಗೆ ಸುಧಾರಣೆಗಳು’ ಎಂಬ ವಿಷಯದ ಅಡಿಯಲ್ಲಿನ ವಿಭಾಗದಲ್ಲಿ, ಕಾಂಗ್ರೆಸ್‌ನ ಪ್ರಣಾಳಿಕೆಯು ಉಲ್ಲೇಖಿಸಿದ್ದು – ನೇರ ತೆರಿಗೆ ಸಂಹಿತೆಯ ಜಾರಿ, ಏಂಜೆಲ್ ತೆರಿಗೆಯ ರದ್ದುಪಡಿಸುವಿಕೆ, ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳ ಮಾಲೀಕತ್ವದ ಎಂ.ಎಸ್.ಎಂ.ಇ ಗಳ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಜಿ.ಎಸ್.ಟಿ ಕೌನ್ಸಿಲ್ ಅನ್ನು ಮರುವಿನ್ಯಾಸಗೊಳಿಸುವುದು, ಇತ್ಯಾದಿ.

“ಪಿತ್ರಾರ್ಜಿತ” ಎಂಬ ಪದವನ್ನು ಮಹಿಳಾ ಸಬಲೀಕರಣ ವಿಭಾಗದ ಅಡಿಯಲ್ಲಿ ಉಲ್ಲೇಖಿಸಲಾಗಿದೆ, ಇದರ ಅನುಸಾರ “ಮದುವೆ, ಉತ್ತರಾಧಿಕಾರ, ಅನುವಾಂಶಿಕತೆ, ದತ್ತು, ಪಾಲನೆ, ಇತ್ಯಾದಿ ವಿಷಯಗಳಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನ ಹಕ್ಕುಗಳನ್ನು ಹೊಂದಿರಬೇಕು. ನಾವು ಎಲ್ಲಾ ಕಾನೂನುಗಳನ್ನು ಪರಿಶೀಲಿಸುತ್ತೇವೆ ಮತ್ತು ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆಯನ್ನು ಖಚಿತಪಡಿಸಿಕೊಳ್ಳುತ್ತೇವೆ.” ಎಂದು  ಪಕ್ಷವು ಭರವಸೆ ನೀಡಿದೆ. ಹಾಗಾಗಿ, ಇದಕ್ಕೂ ಪಿತ್ರಾರ್ಜಿತ ತೆರಿಗೆಗೂ ಯಾವುದೇ ಸಂಬಂಧವಿಲ್ಲ.

ಮುಂದುವರೆದಂತೆ, ನಾವು ಸ್ಯಾಮ್ ಪಿತ್ರೋಡಾ ಅವರು ಯು.ಎಸ್ ನಲ್ಲಿನ ಉತ್ತರಾಧಿಕಾರ ತೆರಿಗೆಯನ್ನು ಉಲ್ಲೇಖಿಸುತ್ತಿರುವ ಎಎನ್ಐ ಸಂದರ್ಶನವನ್ನು ಪರಿಶೀಲಿಸಿದೆವು. ಸಂದರ್ಶನದ ಪೂರ್ಣ ವೀಡಿಯೊ ಇಲ್ಲಿ ಎಎನ್ಐ ಯುಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ, ಅದರ ಶೀರ್ಷಿಕೆ ಹೀಗಿದೆ “ಕಾಂಗ್ರೆಸ್ ಭಾರತದಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಸಮರ್ಥಿಸುತ್ತಿದೆಯೇ? ಸ್ಯಾಮ್ ಪಿತ್ರೋಡಾ ಈ ಸಂದರ್ಶನದಲ್ಲಿ ದೊಡ್ಡ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.” ಇದನ್ನು  ಏಪ್ರಿಲ್ 24, 2024 ರಂದು ಎಎನ್ಐ ತನ್ನ X ಹ್ಯಾಂಡಲ್‌ನಲ್ಲಿಯೂ ಇಲ್ಲಿ ಹಂಚಿಕೊಂಡಿದೆ:

ಈ ಸಂದರ್ಶನದಲ್ಲಿ, ಸ್ಯಾಮ್ ಪಿತ್ರೋಡಾ ಅವರಿಗೆ ದೇಶದ ಸಂಪತ್ತಿನ ಸಮೀಕ್ಷೆಯ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯ ಬಗ್ಗೆ ಮತ್ತು “ಜನರಲ್ಲಿ ಅದನ್ನು ಮರುಹಂಚಿಕೆ ಮಾಡಲು ಒಂದು ಚಟುವಟಿಕೆ ಕೈಗೊಳ್ಳುವ…” ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು.

ಪ್ರತ್ಯುತ್ತರವಾಗಿ ಸ್ಯಾಮ್ ಪಿತ್ರೋಡಾ ಹೇಳಿದ್ದೇನೆಂದರೆ: “ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆಯೆಂದು ನಾನು ಹೇಳಬಯಸುತ್ತೇನೆ. ಉದಾಹರಣಗೆ ಒಬ್ಬ ವ್ಯಕ್ತಿಯು $100 ಮಿಲಿಯ ಮೌಲ್ಯದ ಸಂಪತ್ತನ್ನು ಹೊಂದಿದ್ದು ಆತ ಸತ್ತಾಗ ಅವನು ಸುಮಾರು 45% ದಷ್ಟನ್ನು ತನ್ನ ಮಕ್ಕಳಿಗೆ ವರ್ಗಾಯಿಸಬಹುದು ಎಂದಾದರೆ 55% ಸರ್ಕಾರಕ್ಕೆ ಹೋಗುತ್ತದೆ. ಇದೊಂದು ಆಸಕ್ತಿಕರ ಕಾನೂನು. ನಿಮ್ಮ ಸಮಯದಲ್ಲಿ ನೀವು ಸಂಪತ್ತನ್ನು ಗಳಿಸಿದ್ದೀರಿ, ಈ ನೀವು ಹೋಗುತ್ತಿದ್ದೀರಿ, ನೀವು ಈಗ ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗಾಗಿ ಬಿಟ್ಟುಬಿಡಬೇಕು, ಪೂರ್ತಿಯಾಗಿ ಅಲ್ಲ, ಅದರಲ್ಲಿ ಅರ್ಧದಷ್ಟು, ನನಗಿದು ನ್ಯಾಯೋಚಿತವೆಂದನಿಸುತ್ತದೆ. ಭಾರತದಲ್ಲಿ ಇದಿಲ್ಲ. 10 ಬಿಲಿಯ ಮೌಲ್ಯವುಳ್ಳವರೊಬ್ಬರು ಸತ್ತರೆ, ಅವರ ಮಕ್ಕಳಿಗೆ 10 ಶತಕೋಟಿ ದೊರಕುತ್ತದೆ, ಸಾರ್ವಜನಿಕರಿಗೆ ಏನೂ ಇಲ್ಲ. ಅದರಲ್ಲಿ ಅರ್ಧದಷ್ಟು ನಿಮಗೆ , ಅರ್ಧ ಸಾರ್ವಜನಿಕರಿಗೆ ಎಂದು ಕಾನೂನು ಹೇಳುತ್ತದೆ.(sic)”

“ಇವುಗಳು ಜನರು ಮಾತನಾಡಬೇಕಾದ, ಚರ್ಚಿಸಬೇಕಾದ ವಿಷಯಗಳು. ಕೊನೆಗೆ ತೀರ್ಮಾನ ಏನೆಂದು ಬರುತ್ತದೆಂದು ನನಗೆ ತಿಳಿದಿಲ್ಲ ಆದರೆ ನಾವು ಸಂಪತ್ತಿನ ಮರುಹಂಚಿಕೆ ಎಂದು ಹೇಳುವಾಗ , ನಾವು ಹೊಸ ನೀತಿಗಳು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ, ಇವು ಜನರ ಹಿತಾಸಕ್ತಿಗಾಗಿವೆಯೇ ಹೊರತು ಅತಿ ಶ್ರೀಮಂತರ ಹಿತಾಸಕ್ತಿಗಾಗಿ ಅಲ್ಲ (sic),”

ಯುಎಸ್ ನ ನಿವಾಸಿಯಾದ ಸ್ಯಾಮ್ ಪಿತ್ರೋಡಾ ರವರು ತಮ್ಮ ದೇಶದಲ್ಲಿನ ತೆರಿಗೆಯ ಉದಾಹರಣೆಯನ್ನು ನೀಡುತ್ತಿದ್ದರೇ ಹೊರತು ಭಾರತದಲ್ಲಿ ಅದನ್ನು ಜಾರಿಗೆ ತರಬೇಕೆಂದು ಅವರು ಪ್ರಸ್ತಾಪಿಸಿರಲಿಲ್ಲ.

ಸಂದರ್ಶನವು ಬಿಜೆಪಿಯಿಂದ ಟೀಕೆಗೆ ಒಳಗಾದಾಗ, ಸ್ಯಾಮ್ ಪಿತ್ರೋಡಾ ಅವರು ಸ್ಪಷ್ಟೀಕರಣವನ್ನು ನೀಡಿದರು, “ನಾನು ಟಿವಿಯಲ್ಲಿನ ನನ್ನ ಸಾಮಾನ್ಯ ಸಂಭಾಷಣೆಯಲ್ಲಿ ಯುಎಸ್‌ನಲ್ಲಿನ ಯುಎಸ್ ಪಿತ್ರಾರ್ಜಿತ ತೆರಿಗೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದೆ. ನಾನು ಸತ್ಯಗಳನ್ನು ಉಲ್ಲೇಖಿಸಲೂಬಾರದೇ? ಜನರು ಇಂತಹ ವಿಷಯದ ಕುರಿತು ಮಾತನಾಡಬೇಕು ಮತ್ತು ಚರ್ಚಿಸಬೇಕು ಎಂದು ನಾನು ಹೇಳಿದೆ. ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ನೀತಿಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. (sic)” ಅವರು ಮುಂದುವರಿಯುತ್ತಾ, “55% ತೆಗೆದುಕೊಳ್ಳಲಾಗುವುದು ಎಂದು ಯಾರು ಹೇಳಿದರು? ಭಾರತದಲ್ಲಿ ಇಂತಹ ಕಾರ್ಯಗಳನ್ನು ಮಾಡಬೇಕು ಎಂದು ಯಾರು ಹೇಳಿದರು? ಬಿಜೆಪಿ ಮತ್ತು ಮಾಧ್ಯಮಗಳು ತಲ್ಲಣಗೊಂಡಿರುವುದು ಯಾಕೆ? (sic)””

ಕಾಂಗ್ರೆಸ್ ಪಕ್ಷವು ತನ್ನ ಕಡೆಯಿಂದ, ಈ ಸಮಸ್ಯೆಯಿಂದ ಸ್ಪಷ್ಟವಾಗಿ ದೂರ ಉಳಿದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಯಾವುದೇ ಯೋಜನೆ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. “ಸಂವಿಧಾನವಿದೆ, ನಮಗೆ ಯಾವುದೇ ಉದ್ದೇಶವಿಲ್ಲ. ಅವರ ವಿಚಾರಗಳನ್ನು ನಮ್ಮ ಬಾಯಿಗೆ ಏಕೆ ಹಾಕುತ್ತಿದ್ದೀರಿ? ಕೇವಲ ಮತಕ್ಕಾಗಿ, ಅವರು ಈ ಎಲ್ಲಾ ಆಟಗಳನ್ನು ಆಡುತ್ತಿದ್ದಾರೆ … ”

 

ಕಾಂಗ್ರೆಸ್ ಪಕ್ಷದ ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಇದೇ ವಿಷಯವನ್ನು ಪುನರುಚ್ಚರಿಸುತ್ತಾ “ಕಾಂಗ್ರೆಸ್ ಪಿತ್ರಾರ್ಜಿತ ತೆರಿಗೆಯನ್ನು ಪರಿಚಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ವಾಸ್ತವವಾಗಿ, ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರು 1985 ರಲ್ಲಿ ಎಸ್ಟೇಟ್ ಸುಂಕವನ್ನು ರದ್ದುಗೊಳಿಸಿದ್ದರು.”

ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ, “ಯಾರದೇ ಚಿನ್ನವನ್ನು ತೆಗೆದುಕೊಳ್ಳುವುದರ ಬಗ್ಗೆ ಮತ್ತು ಮಹಿಳೆಯರ ಮಂಗಳಸೂತ್ರವನ್ನು ಕಸಿದುಕೊಳ್ಳುವ ಬಗ್ಗೆ ಅಲ್ಲಿ ಎಲ್ಲಿಯೂ (ಕಾಂಗ್ರೆಸ್ ಪ್ರಣಾಳಿಕೆಯಲ್ಲಿ) ಮಾತನಾಡಲಾಗಿಲ್ಲ… ಸ್ಯಾಮ್ ಪಿತ್ರೋಡಾ ಪ್ರಣಾಳಿಕೆ ಸಮಿತಿಯಲ್ಲಿಲ್ಲ. ಇದು ನಮ್ಮ ಕಾರ್ಯಸೂಚಿಯ ಭಾಗವಲ್ಲ…ಇದು ಅವರ ವೈಯಕ್ತಿಕ ಅಭಿಪ್ರಾಯ. ನೀವು ಒಬ್ಬರ ವೈಯಕ್ತಿಕ ಅಭಿಪ್ರಾಯವನ್ನು ತೆಗೆದುಕೊಂಡು ಅದು ಕಾಂಗ್ರೆಸ್ ಪಕ್ಷದ ಉದ್ದೇಶ ಎಂದು ಹೇಳಲಾಗದು.

ಆದ್ದರಿಂದ, ಹೇಳಿಕೆ ತಪ್ಪುದಾರಿಗೆಳೆಯುವಂತಹ ಸುಳ್ಳು ಹೇಳಿಕೆ.

ಇದನ್ನೂ ಓದಿ:

ರಾಹುಲ್ ಗಾಂಧಿಯವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವ ಧ್ವನಿ ಬದಲಾಯಿಸಿದ ವೀಡಿಯೊ; ಸತ್ಯ ಪರಿಶೀಲನೆ
ಚೀನಾಕ್ಕೆ ಹೆದರಿ ಅರುಣಾಚಲ ಪ್ರದೇಶದಲ್ಲಿ 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲವೇ? ಸತ್ಯ ಪರಿಶೀಲನೆ

  

Leave a Reply

Your email address will not be published. Required fields are marked *

*