Claim/ಹೇಳಿಕೆ: ಚಿತ್ರವು 36 ವರ್ಷಗಳಿಗೊಮ್ಮೆ ಅರಳುವ ನಾಗಪುಷ್ಪ ಹೂವವನ್ನು ತೋರಿಸುತ್ತದೆ.
Conclusion/ಕಡೆನುಡಿ: ಈ ಚಿತ್ರವು ಸಮುದ್ರ ಪ್ರಾಣಿಯಾದ ಸಮುದ್ರ ಪೆನ್ ಅನ್ನು ತೋರಿಸುತ್ತದೆ. ನಾಗಪುಷ್ಪವು ಇಂಡೋ- ಮಾಲಯ ಪ್ರದೇಶದಲ್ಲಿ ಬೆಳೆಯುವ ಒಂದು ನಿತ್ಯಹರಿದ್ವರ್ಣ ಮರವಾಗಿದೆ.
ರೇಟಿಂಗ್: ಶುದ್ಧ ಸುಳ್ಳು–
Fact Check ವಿವರಗಳು:
36 ವರ್ಷಗಳಿಗೊಮ್ಮೆ ಅರಳುತ್ತಿರುವ ನಾಗಪುಷ್ಪ ಹೂವು ಎಂದು ಹೇಳಿಕೆ ನೀಡುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಚಿತ್ರದ ಜೊತೆಯಲ್ಲಿರುವ ಶೀರ್ಷಿಕೆಯು ಹೀಗಿದೆ- “ನಿನ್ನೆ ಮುಂಜಾನೆ 3:30 ಕ್ಕೆ ಮಾನಸ ಸರೋವರದಲ್ಲಿ ಈ ಹೂವನ್ನು ಗುರುತಿಸಲಾಗಿತ್ತು. ಈ ಚಿತ್ರವು ನೆಟ್ಟಗೆ ಹಾವಿನ ಆಕಾರದಲ್ಲಿ ಅರಳುತ್ತಿರುವ ಹೂವನ್ನು ತೋರಿಸುತ್ತದೆ.”
ಡಿಜಿಟೈ ಇಂಡಿಯಾ ತಂಡಕ್ಕೆ ಈ ವೈರಲ್ ಚಿತ್ರ ಸತ್ಯ-ಪರಿಶೀಲನೆಗಾಗಿ ವಾಟ್ಸಾಪ್ ಮೂಲಕ ದೊರಕಿತು.
FACT CHECK
ಡಿಜಿಟೈ ಇಂಡಿಯಾ ತಂಡವು ಕೀವರ್ಡ್ಗಳನ್ನು ಬಳಸಿ ನಾಗಪುಷ್ಪ ಎಂದು ಹೇಳಲಾಗಿರುವ ಈ ಸಸ್ಯದ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಸಾಧ್ಯವೇ ಎಂದು ನೋಡಲು ಸಾಮಾಜಿಕ ಜಾಲತಾಣಗಳನ್ನು ಹುಡುಕಿದೆವು. ಈಗಾಗಲೇ 2016ರ ಹಲವು ಟ್ವೀಟ್ಗಳು ಇದೇ ರೀತಿಯ ಹೇಳಿಕೆಗಳೊಂದಿಗೆ ಇದೇ ಚಿತ್ರವನ್ನು ಹಂಚಿಕೊಂಡಿದ್ದವು. ಈ ಚಿತ್ರವು ನಾಗಪುಷ್ಪ ಹೂವಿನದ್ದು ಎಂದು ಟ್ವೀಟ್ಗಳು ಹೇಳುತ್ತವೆ.
ನಾವು ಚಿತ್ರವನ್ನು ಕ್ರಾಪ್ ಮಾಡಿ ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಫಲಿತಾಂಶಗಳಲ್ಲಿ ಒಂದು, ಸಮುದ್ರ ಪೆನ್ನುಗಳ ಬಗ್ಗೆ ಮಾತನಾಡುವ ಒಂದು ಪುಟಕ್ಕೆ ನಮ್ಮನ್ನು ಕರೆದೊಯ್ಯಿತು. ನಾವು ಸೀ ಪೆನ್ಗಳನ್ನು ಹುಡುಕಿದಾಗ 2021ರ ಒಂದು ರೆಡ್ಡಿಟ್ ಪೋಸ್ಟ್ನಲ್ಲಿ ಅದೇ ಚಿತ್ರವನ್ನು ಕಂಡೆವು. ಇದು ಸಮುದ್ರ ಪೆನ್ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿತ್ತು.
ನಾವು ಸಮುದ್ರ ಪೆನ್ನುಗಳ ಹೆಚ್ಚಿನ ಚಿತ್ರಗಳನ್ನು ಹುಡುಕಿದೆವು, ಆಗ ವೈರಲ್ ಚಿತ್ರದಂತೆ ಕಾಣುವ ವಿವಿಧ ರೀತಿಯ ಸಮುದ್ರ ಪೆನ್ನುಗಳು ಕಂಡುಬಂದವು. ಸಮುದ್ರ ಪೆನ್ನುಗಳನ್ನು ಸಮುದ್ರ ಪ್ರಾಣಿಗಳು ಎಂದು ಬ್ರಿಟಾನಿಕಾ ವಿವರಿಸುತ್ತದೆ. ಇದು ಹೇಳುವಂತೆ ಸಮುದ್ರ ಪೆನ್ನುಗಳು ಎಂಬುವು, “ಪೆನ್ನಾಟುಲೇಶಿಯ ಕ್ರಮದ 300 ಜಾತಿಗಳಲ್ಲಿ ಯಾವುದಾದರೂ ಆಗಿರಬಹುದಾದ ಆಂಥೋಜೊ಼ವಾ (ಫೈಲಮ್ ಸ್ನಿಡೇರಿಯಾ) ವರ್ಗದ ವಸಾಹತುಶಾಹಿ ಬೆನ್ನೆಲುಬುರಹಿತ ಸಮುದ್ರ ಪ್ರಾಣಿಗಳು. ಅವು ಪುಕ್ಕದ ಲೇಖನಿಗಳನ್ನು ಹೋಲುವುದರಿಂದಾಗಿ ಅವುಗಳಿಗೆ ಸಮುದ್ರ ಪೆನ್ ಎಂಬ ಹೆಸರು ಬಂದಿದೆ. ಅವು ಧ್ರುವ ಸಮುದ್ರದಿಂದ ಉಷ್ಣವಲಯದವರೆಗೆ ಆಳವಿಲ್ಲದ ಮತ್ತು ಆಳವಾದ ನೀರಿನಲ್ಲಿ ಕಂಡುಬರುತ್ತವೆ.”
ನಾವು ಕೋಲ್ಕತಾ ವಿಶ್ವವಿದ್ಯಾನಿಲಯದ ಸಂಶೋಧಕರಾದ ಅರಿಜಿತ್ ರೀವ್ಸ್ ರವರೊಂದಿಗೆ ಮಾತನಾಡಿದೆವು, ಅವರು ಹೇಳಿದ್ದೇನೆಂದರೆ “ಸಮುದ್ರ ಪೆನ್ನುಗಳು ಸುಮಾರು 46 ಸೆಂಟಿಮೀಟರು ಎತ್ತರ ಮತ್ತು 102 ಮಿಲಿಮೀಟರು ಅಗಲ ಬೆಳೆಯುತ್ತವೆ. ಈ ಸಮುದ್ರ ಪ್ರಾಣಿಗಳು 20 ಜೋಡಿ ಚಪ್ಪಟೆ ಮತ್ತು ಅಗಲವಾದ ರೆಂಬೆಗಳನ್ನು ಹೊಂದಿರುತ್ತವೆ ಮತ್ತು ಪ್ರತಿ ರೆಂಬೆಯಲ್ಲಿ ಎರಡೂ ಬದಿಗಳಲ್ಲಿ ಪಾಲಿಪ್ ಗಳ ಸಾಲುಗಳು ಇರುತ್ತವೆ. ಪ್ರತಿಯೊಂದು ಪೊಲಿಪ್ ವಿಭಿನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಕೆಲವು ಆಹಾರ ಸೇವನೆ, ರಕ್ಷಣೆ, ರಕ್ತಪರಿಚಲನೆ ಇತ್ಯಾದಿಗಳಲ್ಲಿ ಸಹಾಯ ಮಾಡುತ್ತವೆ. ಅವು ಸಣ್ಣ ಜೀವಿಗಳನ್ನು ತಿನ್ನುತ್ತವೆ.”
ಮತ್ತೊಂದೆಡೆ, ನಾಗಪುಷ್ಪ ಎಂಬುದು ಅಂಜನೀ ಮರದ ಸಂಸ್ಕೃತ ಹೆಸರು. ಮರದ ಲ್ಯಾಟಿನ್ ಹೆಸರು ಮೆಸುವಾ ಫೆರಿಯಾ. ಈ ಮರವು ಇಂಡೋ-ಮಾಲಯ ಪ್ರದೇಶದಲ್ಲಿ ಕಂಡುಬರುತ್ತದೆ. ಈ ಪ್ರದೇಶವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಬಹುಪಾಲು ಭಾಗ ಮತ್ತು ಪೂರ್ವ ಏಷ್ಯಾದ ದಕ್ಷಿಣ ಭಾಗಗಳನ್ನು ಒಳಗೊಂಡಿದೆ. ಅವು ಬೃಹದ್ಗಾತ್ರದ, ಪರಿಮಳಯುಕ್ತ ಬಿಳಿ ಹೂವುಗಳನ್ನು ಹೊಂದಿರುವ ನಿತ್ಯಹರಿದ್ವರ್ಣ ಮರಗಳು. ನಾಗಪುಷ್ಪ ವೃಕ್ಷವು ಶ್ರೀಲಂಕದ ರಾಷ್ಟ್ರೀಯ ಮರವಾಗಿದೆ. ಇದು ಮಿಜೋ಼ರಾಂನ ರಾಜ್ಯ ಮರ ಮತ್ತು ತ್ರಿಪುರಾದ ರಾಜ್ಯ ಹೂವೂ ಹೌದು.
ಇದನ್ನೂ ಓದಿ:
ಕೆನಡಾದ ವಿರೋಧ ಪಕ್ಷದ ನಾಯಕರು ಭಾರತದೊಂದಿಗಿನ ಸಂಬಂಧವನ್ನು ಕೆಡಿಸಿದ್ದಕ್ಕಾಗಿ ಜಸ್ಟಿನ್ ಟ್ರುಡೊರನ್ನು ಟೀಕಿಸಿದರೇ?