ಹೇಳಿಕೆ/Claim: ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ಬಾಬಿಯಾ ಎಂಬ ಸಸ್ಯಾಹಾರಿ ಮೊಸಳೆಯೊಂದು ವೈರಲ್ ವೀಡಿಯೊ ತೋರಿಸುತ್ತದೆ. ಮೊಸಳೆಯು ದೇವಸ್ಥಾನದ ನೈವೇದ್ಯವನ್ನು ಮಾತ್ರ ತಿನ್ನುತ್ತದೆ ಎಂದು ಹೇಳಲಾಗಿದೆ.
ಕಡೆನುಡಿ/Conclusion: ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ವಾಸಿಸುವ ಸಸ್ಯಾಹಾರಿ ಮೊಸಳೆ ಬಾಬಿಯಾ ಬಗೆಗಿನ ವಿಷಯ ಸತ್ಯ. ಆದರೆ, ಬಾಬಿಯಾ 2022ರಲ್ಲಿ ಮರಣಹೊಂದಿತು ಮತ್ತು ಒಂದು ವರ್ಷದ ನಂತರ ಕೆರೆಯಲ್ಲಿ ಹೊಸ ಮೊಸಳೆಯೊಂದು ಕಾಣಿಸಿಕೊಂಡಿತು. ವೈರಲ್ ವೀಡಿಯೊದಲ್ಲಿ ಬಾಬಿಯಾ ಮೊಸಳೆಯ ಕೆಲವು ಚಿತ್ರಗಳನ್ನು ತೋರಿಸಲಾಗಿದೆ, ಆದರೆ ಎಲ್ಲವೂ ಬಾಬಿಯಾದ ಚಿತ್ರಗಳಲ್ಲ. ಒಂದು ಚಿತ್ರವನ್ನು ಒಂದು ಸಾಕ್ಷ್ಯಚಿತ್ರದಿಂದ ತೆಗೆದುಕೊಳ್ಳಲಾಗಿದೆ, ಇದು ಕೋಸ್ಟಾ ರಿಕದ ವ್ಯಕ್ತಿಯೊಬ್ಬರು ಮೊಸಳೆಯೊಂದರ ಶುಶ್ರೂಷೆ ಮಾಡಿ ಅದರೊಂದಿಗೆ ರೂಪಿಸಿದ ಅಸಾಮಾನ್ಯ ಬಾಂಧವ್ಯದ ಕುರಿತಾಗಿರುವ ಸಾಕ್ಷ್ಯಚಿತ್ರ.
ರೇಟಿಂಗ್: ದಾರಿತಪ್ಪಿಸುವ ಸುದ್ದಿ —
ಸತ್ಯ ಪರಿಶೀಲನೆ ವಿವರಗಳು:
ಕೇರಳದ ದೇವಾಲಯದ ಕೊಳದಲ್ಲಿ ಸಸ್ಯಾಹಾರಿ ಮೊಸಳೆ ವಾಸಿಸುತ್ತಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೇರಳದ ಕಾಸರಗೋಡು ಜಿಲ್ಲೆಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ಮೊಸಳೆ ವಾಸವಾಗಿದೆ ಎಂದು ವೀಡಿಯೊ ಆರೋಪಿಸುತ್ತದೆ. ಈ ವೀಡಿಯೊದೊಂದಿಗೆ ಮೊಸಳೆಯ ಮೂಗಿನ ಮೇಲೆ ಒಬ್ಬ ವ್ಯಕ್ತಿಯು ತನ್ನ ತಲೆಯನ್ನು ಇರಿಸಿರುವ ದೃಶ್ಯಗಳನ್ನೂ ಕಾಣಬಹುದು. ಮೊಸಳೆಯ ಹೆಸರು ಬಾಬಿಯಾ ಎಂದೂ, ಮತ್ತು ದೇವಾಲಯದ ಅರ್ಚಕರು ಈ ಪ್ರಾಣಿಗೆ ದೇವಸ್ಥಾನದಿಂದ ಅನ್ನವನ್ನು ಅರ್ಪಿಸುತ್ತಾರೆ ಎಂದೂ ಅದು ಆರೋಪಿಸುತ್ತದೆ.
ಡಿಜಿಟೈ ಇಂಡಿಯಾ ತಂಡಕ್ಕೆ ಈ ವೈರಲ್ವೀಡಿಯೊ ಸತ್ಯ-ಪರಿಶೀಲನೆಗಾಗಿ ವಾಟ್ಸಾಪ್ ಮೂಲಕ ದೊರಕಿತು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಕೀವರ್ಡ್ ಹುಡುಕಾಟದೊಂದಿಗೆ ತನಿಖೆಯನ್ನು ಪ್ರಾರಂಭಿಸಿತು. ನಾವು ಗೂಗಲ್ ನಲ್ಲಿ ಬಾಬಿಯಾ ಮೊಸಳೆಯನ್ನು ಹುಡುಕಿದಾಗ ನಮಗೆ ಹಲವಾರು ಫಲಿತಾಂಶಗಳು ದೊರಕಿದವು. ಒಂದು ಫಲಿತಾಂಶವು ಅಕ್ಟೋಬರ್ 10, 2022ರಂದು ಪ್ರಕಟವಾದ ದಿ ಇಂಡಿಯನ್ ಎಕ್ಸ್ಪ್ರೆಸ್ನ ಲೇಖನವೊಂದಕ್ಕೆ ನಮ್ಮನ್ನು ಕರೆದೊಯ್ಯಿತು. ಏಳು ದಶಕಗಳಿಗೂ ಹೆಚ್ಚು ಕಾಲ ದೇವಾಲಯದ ಕೊಳದಲ್ಲಿ ವಾಸಿಸುತ್ತಿದ್ದ ಬಾಬಿಯಾ ಮರಣ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೊಸಳೆಯು “ದೇವಸ್ಥಾನದಲ್ಲಿ ಅನ್ನ ಮತ್ತು ಬೆಲ್ಲದ ಅರ್ಪಣೆಯನ್ನು ಮಾತ್ರ ತಿನ್ನುತ್ತದೆ” ಎಂದು ಅದರಲ್ಲಿ ಹೇಳಲಾಗಿದೆ.
ನವೆಂಬರ್ 13, 2023ರಂದು ಪ್ರಕಟಗೊಂಡ ದ ಹಿಂದೂ ಪತ್ರಿಕೆಯ ಮತ್ತೊಂದು ವರದಿಯಲ್ಲಿ, ಬಾಬಿಯಾ ಮರಣದ ಒಂದು ವರ್ಷದ ನಂತರ ದೇವಾಲಯದ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವೈರಲ್ ವೀಡಿಯೊದಲ್ಲಿ ಉಲ್ಲೇಖಿಸಲಾಗಿತ್ತು. ಇದು ಕೆರೆಯಲ್ಲಿ ಕಾಣಿಸಿಕೊಂಡ ಮೂರನೇ ಮೊಸಳೆ ಎಂದು ದ ಹಿಂದೂ ವರದಿ ಮಾಡಿದೆ.
ಆದರೆ, ವೈರಲ್ ವೀಡಿಯೊದಲ್ಲಿ ಬಳಸಲಾದ ಎಲ್ಲಾ ದೃಶ್ಯಗಳು ಬಾಬಿಯಾದ್ದಲ್ಲ.
ನಾವು ಎಲ್ಲಾ ದೃಶ್ಯಗಳ ಮೇಲೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು ಮತ್ತು ಮೊಸಳೆಯ ಮೂಗಿನ ಮೇಲೆ ಒಬ್ಬ ವ್ಯಕ್ತಿಯು ತನ್ನ ತಲೆಯನ್ನು ಇರಿಸಿರುವ ಚಿತ್ರವು ಕೇರಳದ ದೇವಸ್ಥಾನದ್ದಲ್ಲ ಎಂದು ಕಂಡುಬಂತು. ಇದು “ದ ಮ್ಯಾನ್ ಹೂ ಸ್ವಿಮ್ಸ್ ವಿತ್ ಕ್ರೊಕೊಡೈಲ್ಸ್”(ಮೊಸಳೆಗಳೊಂದಿಗೆ ಈಜಾಡುವ ಮನುಷ್ಯ) ಎಂಬ ಶೀರ್ಷಿಕೆಯುಳ್ಳ 2013ರ ಸಾಕ್ಷ್ಯಚಿತ್ರದ ಚಿತ್ರ. ವೈರಲ್ ಚಿತ್ರವನ್ನು 20:57 ನಿಮಿಷಗಳ ಸಮಯಕ್ಕೆ ಕಾಣಬಹುದು.
ಮೊಸಳೆಗಳೊಂದಿಗೆ ಈಜಾಡುವ ಮನುಷ್ಯ ಸಾಕ್ಷ್ಯಚಿತ್ರದಲ್ಲಿ ಕೋಸ್ಟ ರಿಕಾದ ಗಿಲ್ಬರ್ಟೊ ‘ಚಿತೊ’ ಶೆಡ್ಡೆನ್ ಎಂಬ ವ್ಯಕ್ತಿಯ ಜೀವನವನ್ನು ತೋರಿಸಲಾಗಿದೆ. ಚಿತೊ ಒಮ್ಮೆ ಮೀನು ಹಿಡಿಯುವಾಗ ಈ ಮೊಸಳೆ ಆತನಿಗೆ ಸಿಕ್ಕಿತು. ಮೊಸಳೆಗೆ ಆಗ ಗಾಯವಾಗಿದ್ದು ಆತನು ಅದಕ್ಕೆ ಶುಶ್ರೂಷೆ ಮಾಡಿ ಅದರ ಆರೋಗ್ಯವನ್ನು ಸರಿಪಡಿಸಿದನು. ಅದೇ ಸಮಯದಲ್ಲಿ ಅವನು ಈ ಮಾಂಸಾಹಾರಿ ಜೀವಿಯೊಂದಿಗೆ ಬಾಂಧವ್ಯ ಬೆಳೆಸಿಕೊಂಡು ಅದಕ್ಕೆ ‘ಪೋಚೋ’ ಎಂಬ ಹೆಸರನ್ನಿತ್ತನು. ಸಾಕ್ಷ್ಯಚಿತ್ರದ ವಿವರಣೆಯಲ್ಲಿ, “ಆ ಪ್ರಾಣಿಗೆ ವಿದಾಯ ಹೇಳಲು ಸಿದ್ಧವಾದರೂ, ಮೊಸಳೆಯು ಆತನಿಂದ ದೂರ ಹೋಗಲು ನಿರಾಕರಿಸಿದ್ದನ್ನು ಕಂಡು ಚಿತೊ ಅಚ್ಚರಿಗೊಂಡನು. ಅವರ ಸ್ನೇಹವು ದಶಕಗಳ ಕಾಲ ಮುಂದುವರಿಯಿತು ಮತ್ತು ಮೊಸಳೆಯೊಂದನ್ನು ಯಶಸ್ವಿಯಾಗಿ ಪಳಗಿಸಿದ ಜಗತ್ತಿನ ಕೆಲವೇ ಜನರಲ್ಲಿ ಒಬ್ಬನೆಂದು ಚಿತೊ ಪರಿಚಿತನಾದನು.” ಎಂದು ತಿಳಿಸಲಾಗಿದೆ.
ಆದ್ದರಿಂದ, ಈ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ
ಸತ್ಯ ಪರಿಶೀಲನೆ: ಸುಡಾನ್ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾಗಿದೆ
2 comments
Pingback: ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ - Digiteye Kannada
Pingback: ಅಯೋಧ್ಯೆ ರಾಮಮಂದಿರ ಕಾರ್ಯಕ್ರಮದ ಭಾಗವಾಗಿರುವ 25,000 ಹವನ ಕುಂಡಗಳನ್ನು ವೀಡಿಯೊ ತೋರಿಸುತ್ತದೆ: ಸತ್ಯ ಪರಿಶೀಲನೆ - Digi