Don't Miss

ಸುನಿತಾ ವಿಲ್ಲಿಯಮ್ಸ್ ಐಎಸ್‌ಎಸ್‌ನಿಂದ ಭೂಮಿಗೆ ಹಿಂದಿರುಗುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: 127 ದಿನಗಳ ಯಶಸ್ವಿ ಬಾಹ್ಯಾಕಾಶ ಪ್ರವಾಸದ ನಂತರ, ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಿದರು.

ಕಡೆನುಡಿ/Conclusion:  ದಾರಿತಪ್ಪಿಸುವ ಹೇಳಿಕೆ. ಸುನಿತಾ ವಿಲಿಯಮ್ಸ್ ರವರು  ಐಎಸ್‌ಎಸ್‌ ನಲ್ಲಿದ್ದ 2012ರ ಹಳೆಯ ವೀಡಿಯೊವನ್ನು ಬಳಸಲಾಗಿದೆ. ಆಕೆ ಫೆಬ್ರವರಿ 2025 ರಲ್ಲಿ ಭೂಮಿಗೆ ಮರಳುವುದೆಂದು ನಿಗದಿಯಾಗಿದೆ.

ರೇಟಿಂಗ್: ದಾರಿತಪ್ಪಿಸುವ ಹೇಳಿಕೆ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.


ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ರವರು  ಸುರಕ್ಷಿತವಾಗಿ ಭೂಮಿಗೆ ಮರಳುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿನ ಈ ಪೋಸ್ಟ್‌ಗಳನ್ನು ನೋಡಿ:

ಒಂದು ಹೇಳಿಕೆಯು ಹೀಗಿದೆ: “127 ದಿನಗಳ ಯಶಸ್ವಿ ಬಾಹ್ಯಾಕಾಶ ಪ್ರವಾಸದ ನಂತರ, “ಶ್ರೀಮತಿ ಸುನಿತಾವಿಲಿಯಮ್ಸ್” ಸುರಕ್ಷಿತವಾಗಿ ಭೂಮಿಗೆ ಮರಳುತ್ತಿದ್ದಾರೆ. ಇದು ಅತ್ಯದ್ಭುತ ವೀಡಿಯೊ ಮತ್ತು ವೀಕ್ಷಿಸಲು ಬಹಳ ಸುಂದರ.” ಮತ್ತೊಬ್ಬರ ಹೇಳಿಕೆ ಹೀಗಿದೆ, “127 ದಿನಗಳ ಯಶಸ್ವಿ ಬಾಹ್ಯಾಕಾಶ ಪ್ರವಾಸದ ನಂತರ, “ಶ್ರೀಮತಿ ಸುನಿತಾ ವಿಲಿಯಮ್ಸ್” ಸುರಕ್ಷಿತವಾಗಿ ಭೂಮಿಗೆ ಮರಳುತ್ತಿದ್ದಾರೆ. ಇದು ಅತ್ಯದ್ಭುತ ವೀಡಿಯೊ. ನೋಡಲೇಬೇಕು.”

ಸತ್ಯ ಪರಿಶೀಲನೆ:

ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಹೇಳಿಕೆಗಳು ಹರಿದಾಡುತ್ತಿರುವುದನ್ನು ನೋಡಿ, ಡಿಜಿಟೈ ಇಂಡಿಯಾ ಇದನ್ನು ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ಈ ವೀಡಿಯೊದಿಂದ ಕೆಲವು ಫ್ರೇಮ್‌ಗಳನ್ನು ತೆಗೆದುಕೊಂಡು, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಇದು ನವೆಂಬರ್ 2012 ರ ಹಳೆಯ ವೀಡಿಯೊ ಎಂದು ತಿಳಿಯಿತು. ಆಗ ಸುನಿತಾ ವಿಲಿಯಮ್ಸ್ ರವರು ಆರ್ಬಿಟಲ್ ಪ್ರಯೋಗಾಲಯ, ಅಡುಗೆಮನೆ, ಶೌಚಾಲಯ, ಮಲಗುವ ಹಾಸಿಗೆ, ಬಾಹ್ಯಾಕಾಶ ಉಡುಗೆ, ಇತ್ಯಾದಿಗಳನ್ನು ಒಳಗೊಂಡಂತೆ ಐಎಸ್‌ಎಸ್‌ನ ಎಲ್ಲಾ ಸೌಲಭ್ಯಗಳು ಮತ್ತು ಪ್ರದೇಶಗಳನ್ನು ತೋರಿಸುತ್ತಾ ವ್ಯಾಪಕ ಪ್ರವಾಸವನ್ನು ರೆಕಾರ್ಡ್ ಮಾಡಿದ್ದರು. 32/33 ಎಕ್ಸ್ಪೆಡಿಶನ್  ಭಾಗವಾಗಿ ಜುಲೈ 15, 2012 ರಂದು ಬೈಕೊನೂರ್ ಕಾಸ್ಮೋಡ್ರೋಮ್‌ನಿಂದ ಸುನಿತಾ ಉಡಾವಣೆಯಾದಾಗ, NASA, ಯೂಟ್ಯೂಬ್‌ನಲ್ಲಿ ಆಕೆಯ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿತ್ತು.

ಆಕೆಯ ರಷ್ಯನ್ ಬಾಹ್ಯಾಕಾಶ ನೌಕೆ ಸೋಯುಜ್ TMA-05M ನಾಲ್ಕು ತಿಂಗಳ ವಾಸ್ತವ್ಯಕ್ಕಾಗಿ ಐಎಸ್‌ಎಸ್‌ ನೊಂದಿಗೆ ಡಾಕ್ ಆಗಿತ್ತು ಮತ್ತು ಆಕೆ ನವೆಂಬರ್ 19, 2012 ರಂದು ಸಹ-ಗಗನಯಾತ್ರಿಗಳಾದ ಯೂರಿ ಮಲೆನ್ಚೆಂಕೊ ಮತ್ತು ಅಕಿಹಿಕೊ ಹೋಶಿಡೆಯವರೊಂದಿಗೆ ಭೂಮಿಗೆ ಮರಳಿದ್ದರು.

ಆದರೆ, ಜೂನ್ 5, 2024 ರಂದು ಪುನಃ, ಬುಚ್ ವಿಲ್ಮೋರ್ ಜೊತೆಗೆ ಸುನಿತಾ ವಿಲಿಯಮ್ಸ್ ರವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಕಳುಹಿಸಲಾಯಿತು ಮತ್ತು ಅವರು  ಐಎಸ್‌ಎಸ್‌ ನೊಂದಿಗೆ ಬೋಯಿಂಗ್ ಸ್ಟಾರ್‌ಲೈನರ್ ಅನ್ನು ಯಶಸ್ವಿಯಾಗಿ ಡಾಕ್ ಮಾಡಿದರು. ಈ ಕಾರ್ಯಾಚರಣೆಯನ್ನು ಒಂದು ವಾರದ ಅವಧಿಯ ಪರೀಕ್ಷಾ ಹಾರಾಟ ಎಂದು ಮೂಲತಃ ಯೋಜಿಸಲಾಗಿತ್ತು, ಆದರೆ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ತಾಂತ್ರಿಕ ತೊಂದರೆಗಳಿಂದಾಗಿ ಅವರು ಹಿಂದಿರುಗಲು ಸಾಧ್ಯವಾಗಲಿಲ್ಲ ಮತ್ತು ಇದರಿಂದಾಗಿ ಅವರು ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ. ಈಗ ಅವರು 2025ರ ಫೆಬ್ರವರಿಯಲ್ಲಿ ಸ್ಪೇಸ್‌ಎಕ್ಸ್ ಡ್ರ್ಯಾಗನ್‌ನಲ್ಲಿ ಮರಳುವರೆಂದು ನಿಗದಿಪಡಿಸಲಾಗಿದೆ.

ಹೀಗಾಗಿ, ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಿದ್ದಾರೆಂಬ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ


 

 

Leave a Reply

Your email address will not be published. Required fields are marked *

*