Don't Miss

ಪ್ರಧಾನಿ ಮೋದಿಯವರು 26 ವರ್ಷದವರಾಗಿದ್ದಾಗ ಕೇದಾರನಾಥದಲ್ಲಿ ಹಸ್ತಾಧಾರ ಯೋಗ ಮುದ್ರೆಯಲ್ಲಿ ತೊಡಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಪ್ರಧಾನಿ ಮೋದಿಯವರು ತಮ್ಮ 26ನೇ ವಯಸ್ಸಿನಲ್ಲಿ ಕೇದಾರನಾಥ ದೇವಸ್ಥಾನದಲ್ಲಿ ಹಸ್ತಾಧಾರ ಯೋಗ ಮುದ್ರೆಯನ್ನು ಪ್ರದರ್ಶಿಸಿದರು. ಮೋದಿಯವರ ಅಪರೂಪದ ವೀಡಿಯೊ.

ಕಡೆನುಡಿ/Conclusion: ಸುಳ್ಳು. ವೀಡಿಯೊದಲ್ಲಿ ಹಸ್ತಾಧಾರ ಯೋಗ ಮಾಡುತ್ತಿರುವ ವ್ಯಕ್ತಿ ಆಚಾರ್ಯ ಸಂತೋಷ್ ತ್ರಿವೇದಿಯವರು, ಪ್ರಧಾನಿ ಮೋದಿ 26ರ ವಯಸ್ಸಿನವರಾಗಿದ್ದಾಗ ಅಲ್ಲ.

ರೇಟಿಂಗ್: ಸಂಪೂರ್ಣವಾಗಿ ತಪ್ಪು--Five rating

ಸತ್ಯ ಪರಿಶೀಲನೆ ವಿವರಗಳು

ಮುಂದೊಂದು ದಿನ ಈತ ಭಾರತದ ಪ್ರಧಾನಿಯಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ ಎಂಬ ಹೇಳಿಕೆಯೊಂದಿಗೆ ಯೋಗಿಯೊಬ್ಬರು ತಮ್ಮ ಕೈಗಳ ಮೇಲೆ ತಲೆಕೆಳಗಾಗಿ ನಡೆಯುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸುತ್ತದೆ.

ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ ಹಿಂದಿಯಲ್ಲಿ ಅದೇ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, ಅದರ ಕನ್ನಡದ ಅನುವಾದ ಹೀಗಿದೆ: “ಈ ವೀಡಿಯೊವನ್ನು ಮಾಡಿದಾಗ, ಈ ಯೋಗಿಯು ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ ಎಂದು ಊಹಿಸಿರಲಿಕ್ಕಿಲ್ಲ. ಎಂತಹ ದಿವ್ಯಾತ್ಮ. ಹಿಮಪಾತದ ನಡುವೆ ತಲೆಕೆಳಗಾಗಿ ಕೈಗಳ ಮೇಲೆ ನಡೆಯುವ ಮೂಲಕ ಕೇದಾರನಾಥಕ್ಕೆ ಪ್ರದಕ್ಷಿಣೆ ಹಾಕುತ್ತಿರುವುದು, ಇಂತಹ ಜೀವ ಭೂಮಿಗೆ ಬಂದಾಗಲೆಲ್ಲಾ, ಅನೇಕ ಜನರು ಅವರನ್ನು ನಿಂದಿಸಿದ್ದಾರೆ. ಆದರೆ ಇಂದು ಅವರನ್ನು ಪೂಜಿಸಲಾಗುತ್ತಿದೆ.”

ಇದೇ ವೀಡಿಯೊವನ್ನು ಒಂದು ವರ್ಷದ ಹಿಂದೆ ಇದು 26 ವರ್ಷ ವಯಸ್ಸಿನ ಪ್ರಧಾನಿ ಮೋದಿ ಎಂಬ ನೇರ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದನ್ನು ನಾವು ಕಂಡುಕೊಂಡೆವು. ಕನ್ನಡದ ಅನುವಾದ ಹೀಗಿದೆ: “ಋಷಿಕೇಶದಲ್ಲಿರುವ ಸಾಧು ದಯಾನಂದ ಜೀಯವರ ಮಠದಲ್ಲಿ ಯೋಗ ಕಲಿತಾಗ ಅವರಿಗೆ ಇಪ್ಪತ್ತಾರು ವರ್ಷ. ಇಂದು ನಮ್ಮ ಪ್ರಧಾನಿಯಾಗಿರುವ ಈ ತಪಸ್ವಿಯನ್ನು ಗುರುತಿಸಿ. ಮೋದಿಜಿಯವರ ಅಪರೂಪದ ವೀಡಿಯೊ.”

FACT-CHECK:

ವೀಡಿಯೊದಲ್ಲಿದ್ದ ವ್ಯಕ್ತಿಯು ಪ್ರಧಾನಿ ಮೋದಿಯವರಂತೆ ಕಾಣದ ಕಾರಣ ವೀಡಿಯೊ ಅಸಹಜವಾಗಿ ಕಂಡಿತು, ಹಾಗಾಗಿ ಡಿಜಿಟೈ ಇಂಡಿಯಾ ತಂಡವು ವೀಡಿಯೊದಿಂದ ಕೆಲವು ಫ್ರೇಮ್‌ಗಳನ್ನು ತೆಗೆದುಕೊಂಡು ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಪರಿಶೀಲಿಸುವ ಮೂಲಕ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿತು. ಜೂನ್ 21, 2021 ರಂದು ಶ್ರೀ ಕೇದಾರ್ 360 ಟ್ರಸ್ಟ್ ತಮ್ಮ ಅಧಿಕೃತ X (ಟ್ವಿಟರ್) ಖಾತೆಯಲ್ಲಿ ಅಪ್‌ಲೋಡ್ ಮಾಡಿದ ಮೂಲ ವೀಡಿಯೊವನ್ನು ಫಲಿತಾಂಶಗಳು ತೋರಿಸಿದವು: “ತೀರ್ಥ ಪುರೋಹಿತ ‘ಆಚಾರ್ಯ ಶ್ರೀ ಸಂತೋಷ್ ತ್ರಿವೇದಿ’ ಕೇದಾರನಾಥ ದೇವಸ್ಥಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚಣೆಯನ್ನು ಆಚರಿಸುತ್ತಿರುವುದು. ಶ್ರೀ ಆಚಾರ್ಯ ಜೀಯವರ ಕೌಶಲ್ಯ ಮತ್ತು ಸಾಮರ್ಥ್ಯವು ಅನುಕರಣೀಯವಾಗಿದ್ದು ಜಗತ್ತಿನಾದ್ಯಂತ ಅನೇಕ ಜನರನ್ನು ಪ್ರೇರೇಪಿಸುತ್ತದೆ. ಜೈ ಶ್ರೀ ಕೇದಾರನಾಥ”.

ಆಚಾರ್ಯ ಶ್ರೀ ಸಂತೋಷ್ ತ್ರಿವೇದಿಯವರ ಕುರಿತು ಹೆಚ್ಚಿನ ಹುಡುಕಾಟ ನಡೆಸಿದಾಗ, ಮಾರ್ಚ್ 24, 2020ರಂದು ಸುದ್ದಿಸಂಸ್ಥೆ ANI ವರದಿ ಮಾಡಿದಂತೆ ಅವರು ಕೇದಾರನಾಥ ದೇವಸ್ಥಾನದಲ್ಲಿ ಹಸ್ತಾಧಾರ ಯೋಗ ಮುದ್ರೆಯನ್ನು ಪ್ರದರ್ಶಿಸಿದರು ಎಂದು ತಿಳಿದುಬಂತು, ಈ ಸುದ್ದಿಯು 2021ರಲ್ಲಿ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಒಂದು ವರ್ಷದ ಮೊದಲು ವರದಿಯಾಗಿತ್ತು. ಆದ್ದರಿಂದ, ಪ್ರಧಾನಿ ಮೋದಿಯವರು 26 ವರ್ಷದವರಾಗಿದ್ದಾಗ ಹಸ್ತಾಧಾರ ಯೋಗ ಮುದ್ರೆಯನ್ನು ಪ್ರದರ್ಶಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂಬ ಹೇಳಿಕೆ ಸುಳ್ಳು

ಇದನ್ನೂ ಓದಿ:
ಬೆಂಗಳೂರಿನಲ್ಲಿ ಅಂಗಡಿಗಳ ಕೇಸರಿ ಬಣ್ಣದ ಸೂಚನಾ ಫಲಕಗಳನ್ನು ಬೃ.ಬೆಂ.ಮ.ಪಾ ತೆಗೆದುಹಾಕುತ್ತಿದ್ದಾರಾ? ಸತ್ಯ ಪರಿಶೀಲನೆ
ಇಲ್ಲ, "ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ " ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*