US ಸುಂಕ ಯುದ್ಧದ ನಡುವೆ ಅಮೆಜಾನ್ ಆಪ್ ಅನ್ನು ತೆಗೆದುಹಾಕುವಂತೆ NSA ಅಜಿತ್ ದೋವಲ್ ಭಾರತೀಯರನ್ನು ಒತ್ತಾಯಿಸಿದರೇ? ಸತ್ಯ ಪರಿಶೀಲನೆ

US ಸುಂಕ ಯುದ್ಧದ ನಡುವೆ ಅಮೆಜಾನ್ ಆಪ್ ಅನ್ನು ತೆಗೆದುಹಾಕುವಂತೆ NSA ಅಜಿತ್ ದೋವಲ್ ಭಾರತೀಯರನ್ನು ಒತ್ತಾಯಿಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಅಮೆರಿಕದೊಂದಿಗಿನ ಸುಂಕ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆಜಾನ್ ಆಪ್ ಅನ್ನು ತೆಗೆದುಹಾಕುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾರತೀಯರನ್ನು ಒತ್ತಾಯಿಸಿದ್ದಾರೆ.

ಕಡೆನುಡಿ/Conclusion : ಹೇಳಿಕೆ ಸುಳ್ಳು. ಅಧಿಕೃತ ದಾಖಲೆಗಳು ಅಥವಾ ಅಜಿತ್ ದೋವಲ್ ಅವರ ಸಾರ್ವಜನಿಕ ಹೇಳಿಕೆಗಳು ಈ ಹೇಳಿಕೆಗೆ ಯಾವುದೇ ವಿಶ್ವಾಸಾರ್ಹ ಬೆಂಬಲ ಒದಗಿಸುವುದಿಲ್ಲ. ಸರ್ಕಾರಿ ಪೋರ್ಟಲ್‌ಗಳು ಮತ್ತು ಪ್ರಮುಖ ಸುದ್ದಿ ಮಾಧ್ಯಮಗಳನ್ನು ಪರಿಶೀಲಿಸಿದಾಗ ದೋವಲ್ ರವರು  ಯಾವುದೇ ಸಮಯದಲ್ಲಿ ಅಂತಹ ನಿರ್ದೇಶನವನ್ನು ನೀಡಿರುವ ಬಗ್ಗೆ ಯಾವುದೇ ಸೂಚನೆಗಳು ಕಂಡುಬಂದಿಲ್ಲ.

ರೇಟಿಂಗ್/Rating : ಸುಳ್ಳು–

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಇತ್ತೀಚೆಗೆ,  NSA ಅಜಿತ್ ದೋವಲ್ ಭಾರತೀಯರು ಅಮೆಜಾನ್ ಆಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವಂತೆ (ತೆಗೆದುಹಾಕುವಂತೆ) ಒತ್ತಾಯಿಸಿದ್ದಾರೆ ಎಂದು ಹೇಳುವ ಪೋಸ್ಟ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಅಮೆರಿಕದೊಂದಿಗೆ ಹೆಚ್ಚುತ್ತಿರುವ ಸುಂಕದ ಉದ್ವಿಗ್ನತೆಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ಬಂದಿದೆ ಎಂದು ಹೇಳಲಾಗಿದೆ. ಭಾರತದಿಂದ ಗಮನಾರ್ಹ ಆದಾಯ ಗಳಿಸುತ್ತಿರುವ ಪ್ರಮುಖ ಅಮೇರಿಕನ್ ಕಂಪನಿಯಾದ ಅಮೆಜಾನ್ ಅನ್ನು ಬಹಿಷ್ಕರಿಸುವ ಮೂಲಕ ಅಮೆರಿಕದ ಮೇಲೆ ಆರ್ಥಿಕ ಒತ್ತಡ ಹೇರುವುದು ಈ ಕರೆಯ ಉದ್ದೇಶವಾಗಿದೆ ಎನ್ನಲಾಗಿದೆ. ಫೇಸ್‌ಬುಕ್ ಬಳಕೆದಾರ ‘संदीप बिजारणियाँ’ ಅಂತಹ ಹೇಳಿಕೆಯನ್ನು ಹಿಂದಿಯಲ್ಲಿ ಹಂಚಿಕೊಂಡಿದ್ದಾರೆ, ಅದನ್ನು ಕೆಳಗೆ ನೋಡಬಹುದು –

ಇದರ ಕನ್ನಡದ ಅನುವಾದ ಹೀಗಿದೆ: “ದೋವಲ್ ರವರ ಈ ಪ್ರಕಟಣೆಯು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಎಲ್ಲಾ ಭಾರತೀಯರು ತಮ್ಮ ಮೊಬೈಲ್ ಫೋನ್‌ಗಳಿಂದ ಅಮೆಜಾನ್ ಆಪ್ ಅನ್ನು ತೆಗೆದುಹಾಕುವ ಮೂಲಕ ಸುಂಕ ಯುದ್ಧಕ್ಕಾಗಿ ಅಮೆರಿಕಕ್ಕೆ ಹೊಡೆತ ನೀಡಬಹುದು. ನಿಮ್ಮ ಮೊಬೈಲ್ ಫೋನ್‌ಗಳ ಬಲದೊಂದಿಗೆ ನೀವು ಮನೆಯಲ್ಲಿ ಕುಳಿತುಕೊಂಡೇ ಅಮೆರಿಕದ ತಲೆಬಾಗಿಸಬಹುದು. ಇದಕ್ಕೆ ನಾವೆಲ್ಲರೂ ಜವಾಬ್ದಾರರು.

ಕಷ್ಟದ ಸಮಯದಲ್ಲಿ ದೇಶಕ್ಕಿಂತ ಮುಖ್ಯವಾದುದು ಏನೂ ಇಲ್ಲ. ಅಮೆಜಾನ್ ಪ್ರತಿದಿನ 60 ಲಕ್ಷ ಆರ್ಡರ್‌ಗಳನ್ನು ಸ್ವೀಕರಿಸುತ್ತದೆ. ಪ್ರತಿ ಆರ್ಡರ್‌ಗೆ 100 ರೂಪಾಯಿ ಗಳಿಸಿದರೂ, ಅದರ ದೈನಂದಿನ ಗಳಿಕೆ 60 ಕೋಟಿ ರೂಪಾಯಿ ಆಗುತ್ತದೆ ಮತ್ತು ಅದರ ವಾರ್ಷಿಕ ಗಳಿಕೆ 2190000000000 ರೂಪಾಯಿಗಳಾಗುತ್ತದೆ. ಅಮೆಜಾನ್ ಅನ್ನು ತೆಗೆದುಹಾಕುವ ಮೂಲಕ, ನಾವು ಅಮೆರಿಕಕ್ಕೆ ಸೂಕ್ತವಾದ ಉತ್ತರವನ್ನು ನೀಡಬೇಕು, ಅವರಿಗೆ ಭಾರತದ ಜನಸಂಖ್ಯೆಯ ಅರಿವು ಮೂಡಿಸಬೇಕು. ಈ ಜನಸಂಖ್ಯೆಯು ಭಾರತದ ವಿನಾಶಕ್ಕಾಗಿ ಇರುವಂಥದ್ದಲ್ಲ, ಈ ಜನಸಂಖ್ಯೆಯು ಭಾರತವನ್ನು ವಿಶ್ವದಲ್ಲಿಯೇ ಒಂದನೇ ಸ್ಥಾನಕ್ಕೆ ಕೊಂಡೊಯ್ಯುತ್ತದೆ, ಜೈ ಹಿಂದ್, ಸ್ವಾತಂತ್ರ್ಯ ದಿನದಂದು ಭಾರತ ಮಾತೆಗೆ ಇದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ. ಸರ್ಕಾರ ಮಾತ್ರ ಅಮೆರಿಕದ ವಿರುದ್ಧ ಏಕೆ ಹೋರಾಡಬೇಕು, ಇದು ನಮ್ಮ ದೇಶವೂ ಹೌದು. ಜೈ ಹಿಂದ್, ವಂದೇ ಮಾತರಂ.”

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ಹೇಳಿಕೆಗೆ ಅಧಿಕೃತ ದಾಖಲೆಗಳು ಅಥವಾ ದೋವಲ್ ರವರ ಸಾರ್ವಜನಿಕ ಹೇಳಿಕೆಗಳ ವಿಶ್ವಾಸಾರ್ಹ ಬೆಂಬಲವಿಲ್ಲ. ಸರ್ಕಾರಿ ಪೋರ್ಟಲ್‌ಗಳು ಮತ್ತು ಸುದ್ದಿ ವೆಬ್‌ಸೈಟ್‌ಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದಾಗ ದೋವಲ್ ರವರು ಅಂತಹ ನಿರ್ದೇಶನ ನೀಡಿರುವುದರ ಬಗ್ಗೆ ಯಾವುದೇ ಪುರಾವೆಗಳು ಕಂಡುಬರಲಿಲ್ಲ.

ವಿವರಗಳು:

ಈ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಅಮೆಜಾನ್ ಅನ್ನು ಅನ್ ಇನ್ಸ್ಟಾಲ್ ಮಾಡುವ ಕುರಿತು ಅಜಿತ್ ದೋವಲ್ ರವರ ಹೇಳಿಕೆ” ಎಂಬ ಪದಪುಂಜವನ್ನು ಬಳಸಿ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಪತ್ರಿಕಾ ಮಾಹಿತಿ ಬ್ಯೂರೋ (PIB), ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಪ್ರಧಾನ ಮಂತ್ರಿ ಕಚೇರಿ (PMO) ಸೇರಿದಂತೆ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಅಮೆಜಾನ್ ಬಹಿಷ್ಕಾರ ಅಥವಾ ಆಪ್ ತೆಗೆದುಹಾಕುವುದನ್ನು ಪ್ರತಿಪಾದಿಸುವಂತಹ ದೋವಲ್ ರವರ ಯಾವುದೇ ಪತ್ರಿಕಾ ಪ್ರಕಟಣೆಗಳು, ಭಾಷಣಗಳು ಅಥವಾ ಹೇಳಿಕೆಗಳು ಕಂಡುಬಂದಿಲ್ಲ.

ಜನವರಿ 10, 2026ರಂದು ಪ್ರಕಟವಾದ ದ ಹಿಂದೂ ಪತ್ರಿಕೆಯ ವರದಿಯ ಪ್ರಕಾರ, ಅಜಿತ್ ದೋವಲ್ ರವರು ಬಲವಾದ ಭಾರತವನ್ನು ನಿರ್ಮಿಸುವೆಡೆಗೆ ಒತ್ತು ನೀಡಿದರು, ಆದರೆ ಸುಂಕಗಳು, ಅಮೆಜಾನ್ ಅಥವಾ ಬಹಿಷ್ಕಾರಗಳ ಬಗ್ಗೆ ಯಾವುದೇ ಮಾತನಾಡಲಿಲ್ಲ. “ನಾವು ನಮ್ಮ ಇತಿಹಾಸಕ್ಕಾಗಿ ಸೇಡು ತೀರಿಸಿಕೊಳ್ಳಬೇಕು ಮತ್ತು ಈ ದೇಶವನ್ನು ಪುನಃ ಶ್ರೇಷ್ಠತೆಯ ಉತ್ತುಂಗಕ್ಕೆ ಕೊಂಡೊಯ್ಯಬೇಕು- ಕೇವಲ ಗಡಿ ಭದ್ರತೆಯ ವಿಷಯದಲ್ಲಿ ಮಾತ್ರವಲ್ಲದೆ,  ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ, ಪ್ರತಿಯೊಂದು ಅಂಶದಲ್ಲೂ” ಎಂದು ದೋವಲ್ ಹೇಳಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಗತ್ತಿನಲ್ಲಿ ಭದ್ರತಾ ಸಮಸ್ಯೆಗಳಿಂದಾಗಿ ಮತ್ತು “ಭದ್ರತೆಗಾಗಿ ಮತ್ತೊಂದು ದೇಶದ ಮೇಲೆ ತಮ್ಮ ನಿಯಮಗಳನ್ನು ಹೇರುವುದರಿಂದಾಗಿ” ಸಂಘರ್ಷಗಳು ಹುಟ್ಟುತ್ತವೆ ಎಂದೂ ಅವರು ಹೇಳಿದರು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ –

ಇದರ ನಂತರ, ಆಗಸ್ಟ್ 7, 2025ರ ರಾಯಿಟರ್ಸ್‌ನ ಮತ್ತೊಂದು ವರದಿಯು ನಮ್ಮ ಗಮನಕ್ಕೆ ಬಂತು, ಇದು ಭಾರತದ ಮೇಲೆ US 50% ಸುಂಕ ಹೇರುವ ಸಮಯದಲ್ಲಿ ದೋವಲ್ ರವರು ರಷ್ಯಾಗೆ ಭೇಟಿ ನೀಡಿದ ಸುದ್ದಿಯನ್ನು ಒಳಗೊಂಡಿದೆ. US ಸುಂಕಗಳನ್ನು ವಿಧಿಸಿದ ನಂತರ “ದ್ವಿಪಕ್ಷೀಯ ಭದ್ರತಾ ಮಾತುಕತೆಗಳಲ್ಲಿ “ಕಾರ್ಯತಾಂತ್ರಿಕ ಪಾಲುದಾರಿಕೆ”ಗೆ ತಮ್ಮ ಬಾಧ್ಯತೆಯನ್ನು ರಷ್ಯಾ ಮತ್ತು ಭಾರತವು ಒತ್ತಿಹೇಳಿವೆ” ಎಂದು ವರದಿಯು ಹೇಳುತ್ತದೆ. ಆದರೆ, ಅಮೆಜಾನ್ ಬಹಿಷ್ಕಾರದ ಬಗ್ಗೆ ಅಥವಾ ಅಜಿತ್ ದೋವಲ್ ರವರು ಅಂತಹ ಯಾವುದೇ ಸಲಹೆ ನೀಡಿರುವುದರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿರುವಂತೆ, “ಭಾರತವು ಹೆಚ್ಚುವರಿ 25% ಸುಂಕಗಳನ್ನು ಹಿಂದಕ್ಕೆ ಪಡೆಯುವಂತೆ ಅಮೆರಿಕವನ್ನು ಒತ್ತಾಯಿಸಿದೆ” ಎಂದು ಜನವರಿ 5, 2026 ರಂದು ಪ್ರಕಟವಾದ TOI ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ರವರು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆಗಳಲ್ಲಿ ಸುಂಕ ಪರಿಹಾರವನ್ನು ಒತ್ತಾಯಿಸುತ್ತಾ, “ಭಾರತವು ರಷ್ಯಾದ ತೈಲವನ್ನು ಕಡಿಮೆ ಖರೀದಿಸುತ್ತಿದೆ” ಎಂಬುದನ್ನು ಎತ್ತಿ ತೋರಿಸಿದ್ದಾರೆ ಎಂಬುದನ್ನು ಭಾರತದ ಅಧಿಕೃತ ವ್ಯಾಪಾರ ಪ್ರತಿಕ್ರಿಯೆಗಳಲ್ಲಿ ಒಳಪಡಿಸಲಾಗಿದೆ. ಆದರೆ, ಅಜಿತ್ ದೋವಲ್ ರವರ ನಿರ್ದೇಶನದ ಮೇರೆಗೆ ಅಮೆಜಾನ್ ಅನ್ನು ಬಹಿಷ್ಕರಿಸುವುದು ಅಥವಾ ತೆಗೆದುಹಾಕುವುದು ಮುಂತಾದ US ಸಂಸ್ಥೆಗಳ ವಿರುದ್ಧ ಯಾವುದೇ ಗ್ರಾಹಕ ಕ್ರಮಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

ಮತ್ತೊಂದೆಡೆ, RSS ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ್ ಮಂಚ್, US ಸುಂಕಗಳ ಸಂಬಂಧದಲ್ಲಿ ಅಮೆಜಾನ್, ವಾಲ್‌ಮಾರ್ಟ್ ಮತ್ತು ಫ್ಲಿಪ್‌ಕಾರ್ಟ್‌ನಂತಹ US ಕಂಪನಿಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿತು ಎಂಬುದನ್ನು ಆಗಸ್ಟ್ 8, 2025 ರ ದ ಪ್ರಿಂಟ್ ಉಲ್ಲೇಖಿಸುತ್ತದೆ. ಆದರೆ, ಇದು ಭಾರತ ಸರ್ಕಾರದ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಇದಲ್ಲದೆ, ಇದು NSA ಅಜಿತ್ ದೋವಲ್‌ ರವರಿಗೆ ಸಂಬಂಧಿಸಿದ್ದಲ್ಲ ಮತ್ತು ಅವರ ಯಾವುದೇ ಹೇಳಿಕೆಗಳು ಅಥವಾ ನೀತಿಗಳಿಗೆ ಸಂಬಂಧಿಸಿದ್ದಲ್ಲ.

ಅಜಿತ್ ದೋವಲ್ ರವರು ಭಾರತದ ಗಡಿ ಭದ್ರತೆ, ಒಟ್ಟಾರೆ ಅಭಿವೃದ್ಧಿ, US ಏರಿದ ಸುಂಕಗಳ ನಡುವೆ ರಷ್ಯಾದೊಂದಿಗಿನ ಕಾರ್ಯತಾಂತ್ರಿಕ ಪಾಲುದಾರಿಕೆಯ ಬಗ್ಗೆ ಒತ್ತು ನೀಡುತ್ತಿದ್ದರು, ಆದರೆ ಅವರು ಅಮೆಜಾನ್ ಆಪ್ ಅನ್ನು ಬಹಿಷ್ಕರಿಸುವ ಬಗ್ಗೆ ಎಲ್ಲಿಯೂ ಉಲ್ಲೇಖಿಸುವುದನ್ನು ನಾವು ಕಾಣುವುದಿಲ್ಲ.

ಅಜಿತ್ ದೋವಲ್ ರವರ ಯಾದೃಚ್ಛಿಕ ಫೈಲ್ ಚಿತ್ರವನ್ನು ತೆಗೆದುಕೊಂಡು ಈ ಹೇಳಿಕೆಯನ್ನು ಮಾಡಲಾಗಿದೆ.

ಆದ್ದರಿಂದ, ಹೇಳಿಕೆ ಸುಳ್ಳು.

******************************************************
ಇದನ್ನೂ ಓದಿ:

ಭಾರತದ ರಾಜಧಾನಿ ದೆಹಲಿಯನ್ನು ಶೀಘ್ರದಲ್ಲೇ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಲಾಗುವುದೇ? ಸತ್ಯ ಪರಿಶೀಲನೆ

ಚೀನಾ ದೇಶವು ರಷ್ಯಾದ ಉಚಿತ-ಕ್ಯಾನ್ಸರ್ ಲಸಿಕೆಯನ್ನು ಅನುಮೋದಿಸಿ ಒಪ್ಪಂದಗಳಿಗೆ ಸಹಿ ಮಾಡಲು ಯೋಜಿಸುತ್ತಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published.