Don't Miss

ಸಮೋಸಾಗಳು ಮತ್ತು ಜಿಲೇಬಿಗಳು ಶೀಘ್ರದಲ್ಲೇ ಸಿಗರೇಟ್ ಪ್ಯಾಕೇಜಿಂಗ್‌ ಗಳಂತೆ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿರುತ್ತವೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸಮೋಸಾ ಮತ್ತು ಜಿಲೇಬಿಗಳು ಶೀಘ್ರದಲ್ಲೇ ಸಿಗರೇಟ್ ಪ್ಯಾಕೇಜಿಂಗ್‌ನಂತೆಯೇ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿರುತ್ತವೆ ಎಂದು X ನಲ್ಲಿ ಪೋಸ್ಟ್ ಮಾಡಲಾದ ಒಂದು ಟ್ವೀಟ್‌ ಹೇಳಿದೆ.

ಕಡೆನುಡಿ/Conclusion: ಸಂಪೂರ್ಣವಾಗಿ ತಪ್ಪು.  ಭಾರತದ ಕೇಂದ್ರೀಯ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ ಸಲಹೆಯು ಕೆಲಸದ ಸ್ಥಳಗಳಲ್ಲಿ ಸಕ್ಕರೆ ಬೋರ್ಡ್ ಗಳಲ್ಲಿ ಗುಪ್ತ ಎಣ್ಣೆ ಅಥವಾ ಕೊಬ್ಬಿನ ಪ್ರದರ್ಶನದ ಕುರಿತಾಗಿದ್ದು, ಅದು ಸಿಗರೇಟ್ ಪ್ಯಾಕೇಜಿಂಗ್‌ನಂತೆ ಎಚ್ಚರಿಕೆ ಲೇಬಲ್ ಅಲ್ಲ.

ರೇಟಿಂಗ್/Rating: ಸಂಪೂರ್ಣವಾಗಿ ತಪ್ಪುFive rating

**********************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಜುಲೈ 17, 2025 ರಂದು, ಟ್ವಿಟರ್ ಬಳಕೆದಾರರೊಬ್ಬರು ಸಿಗರೇಟ್ ಪ್ಯಾಕೆಟ್‌ಗಳಲ್ಲಿರುವಂತೆಯೇ ಸಮೋಸಾ ಮತ್ತು ಜಿಲೇಬಿಗಳೂ ಶೀಘ್ರದಲ್ಲೇ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿರುತ್ತವೆ ಎನ್ನುತ್ತಾ ಒಂದು ಚಿತ್ರವನ್ನು ಪೋಸ್ಟ್ ಮಾಡಿದರು. “ಇದು ಹಾಸ್ಯಾಸ್ಪದ ಎಂದು ನನ್ನ ಅನಿಸಿಕೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?” ಎಂಬ ಶೀರ್ಷಿಕೆಯನ್ನು ಒಳಗೊಂಡ ಟ್ವೀಟ್, ಈ ಹೊಸ ನಿಯಮದ ಹಿಂದೆ ಭಾರತೀಯ ಆರೋಗ್ಯ ಸಚಿವಾಲಯದ ಕೈವಾಡವಿದೆ ಎಂದು ಸೂಚಿಸಿತು.

ಚಿತ್ರದೊಂದಿಗೆ- “ಸಮೋಸಾ ಮತ್ತು ಜಿಲೇಬಿಗಳು ಸಿಗರೇಟುಗಳಂತಹ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿರುತ್ತವೆ: ವರದಿ” ಎಂಬ ಪಠ್ಯವನ್ನು ಒಳಗೊಂಡಿತ್ತು ಮತ್ತು ಆನ್‌ಲೈನ್‌ ಮಾಧ್ಯಮದಲ್ಲಿ ತ್ವರಿತವಾಗಿ ಗಮನ ಸೆಳೆಯಿತು. ಈ ಪೋಸ್ಟ್ ನಲ್ಲಿ ಒಂದು ಅನಾಮಧೇಯ “ವರದಿ”ಯನ್ನು ಉಲ್ಲೇಖಿಸಲಾಗಿದೆ ಮತ್ತು ಯಾವುದೇ ಅಧಿಕೃತ ಮೂಲವನ್ನು ಉಲ್ಲೇಖಿಸಲಾಗಿಲ್ಲ, ಆದರೆ ಇದು ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಿಂದೆ ಕಂಡುಬಂದ ಇದೇ ರೀತಿಯ ಹೇಳಿಕೆಯನ್ನು ಪ್ರತಿಧ್ವನಿಸಿತು, ಇದರಿಂದಾಗಿ ಅಂತಹ ನಿರ್ದೇಶನವನ್ನು ನಿಜವಾಗಿಯೂ ಹೊರಡಿಸಲಾಗಿದೆಯೇ ಎಂಬುದರ ಕುರಿತಾಗಿ ಗೊಂದಲ ಹುಟ್ಟಿಕೊಂಡಿತು.

ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಕಾಣಬಹುದು:

FACT CHECK:

ಡಿಜಿಟೈ ಇಂಡಿಯಾ ತಂಡವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (PIB) ಸೇರಿದಂತೆ ಅಧಿಕೃತ ಸರ್ಕಾರಿ ಪೋರ್ಟಲ್‌ಗಳಲ್ಲಿ ಕೂಲಂಕುಷ ಹುಡುಕಾಟ ನಡೆಸಿದಾಗ ತಿಳಿದುಬಂದದ್ದೇನೆಂದರೆ, ಸಮೋಸಾಗಳು ಮತ್ತು ಜಿಲೇಬಿಗಳಂತಹ ಭಾರತೀಯ ತಿಂಡಿಗಳ ಮೇಲೆ ಕಡ್ಡಾಯ ಆರೋಗ್ಯ ಎಚ್ಚರಿಕೆಯ ಬಗ್ಗೆ ಯಾವುದೇ ನಿರ್ದೇಶನ, ಅಧಿಸೂಚನೆ ಅಥವಾ ಪತ್ರಿಕಾ ಪ್ರಕಟಣೆ ನೀಡಲಾಗಿಲ್ಲ. ಅಷ್ಟೇ ಅಲ್ಲದೆ, PIB ಫ್ಯಾಕ್ಟ್ ಚೆಕ್ ಘಟಕವು ಈಗಾಗಲೇ ಕೆಳಗೆ ತೋರಿಸಿರುವಂತೆ ಇದನ್ನು ಸುಳ್ಳು ಎಂದು ಸ್ಪಷ್ಟಪಡಿಸಿದೆ:

‘ಕೆಲಸದ ಸ್ಥಳಗಳಲ್ಲಿ ಸಕ್ಕರೆ ಬೋರ್ಡ್ ಗಳ ಮೇಲೆ ಗುಪ್ತ ಎಣ್ಣೆ ಅಥವಾ ಕೊಬ್ಬಿನ ಪ್ರದರ್ಶನ, ಆರೋಗ್ಯಕರ ಆಹಾರವನ್ನು ಉತ್ತೇಜಿಸುವ ಒಂದು ಉಪಕ್ರಮ’ ಎಂಬ ನಿರ್ದೇಶನವನ್ನು ಕೆಲವು ಆಹಾರ ಉತ್ಪನ್ನಗಳ ಮೇಲೆ ಸಿಗರೇಟ್ ಪ್ಯಾಕೇಜಿಂಗ್‌ನಂತಹ ಎಚ್ಚರಿಕೆ ಲೇಬಲ್‌ಗಳ ಸೇರ್ಪಡೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಕೆಲಸದ ಸ್ಥಳಗಳಲ್ಲಿ ಆರೋಗ್ಯಕರ ಆಯ್ಕೆಗಳನ್ನು ಕೈಗೊಳ್ಳುವತ್ತ ಒಂದು ಉಪಕ್ರಮವಾಗಿ ಪ್ರತ್ಯೇಕವಾಗಿ ಒಂದು ಸಲಹೆಯನ್ನು ಹೊರಡಿಸಿದೆ. ವಿವಿಧ ಆಹಾರ ಪದಾರ್ಥಗಳಲ್ಲಿ ಮರೆಮಾಚಿದ ಕೊಬ್ಬಿನಂಶ ಮತ್ತು ಹೆಚ್ಚುವರಿ ಸಕ್ಕರೆಯ ಹಾನಿಕಾರಕ ಸೇವನೆಯ ಬಗ್ಗೆ ಜಾಗೃತಿ ಮೂಡಿಸಲು ಲಾಬಿಗಳು, ಕ್ಯಾಂಟೀನ್‌ಗಳು, ಕೆಫೆಟೇರಿಯಾಗಳು, ಸಭಾ ಕೊಠಡಿಗಳು ಮುಂತಾದ ವಿವಿಧ ಕೆಲಸದ ಸ್ಥಳಗಳಲ್ಲಿ ಫಲಕಗಳನ್ನು ಪ್ರದರ್ಶಿಸುವ ಬಗ್ಗೆ ಇದು ಸಲಹೆ ನೀಡುತ್ತದೆ. ಈ ಫಲಕಗಳು ದೇಶದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯ ವಿರುದ್ಧ ಹೋರಾಡುವ ಬಗ್ಗೆ ದೈನಂದಿನ ಜ್ಞಾಪನೆಗಳಾಗಿ ಕಾರ್ಯನಿರ್ವಹಿಸುವುದು ಇದರ ಉದ್ದೇಶ.

ಈ ಆರೋಗ್ಯ ಸಚಿವಾಲಯದ ಸಲಹೆಯು ಮಾರಾಟಗಾರರು ಮಾರಾಟ ಮಾಡುವ ಆಹಾರ ಉತ್ಪನ್ನಗಳ ಮೇಲೆ ಎಚ್ಚರಿಕೆ ಲೇಬಲ್‌ಗಳನ್ನು ನಿರ್ದೇಶಿಸುವುದಿಲ್ಲ ಮತ್ತು ಭಾರತೀಯ ತಿಂಡಿಗಳೆಡೆಗೆ ಪಕ್ಷಪಾತ ಹೊಂದಿಲ್ಲ. ಇದು ಭಾರತದ ಸಮೃದ್ಧ ಸ್ಟ್ರೀಟ್ ಫೂಡ್ ಸಂಸ್ಕೃತಿಯನ್ನು ಗುರಿಯಾಗಿಸಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇದರ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿದೆ. ಲಿಂಕ್ ಅನ್ನು ಇಲ್ಲಿ ಕಾಣಬಹುದು.

ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಯು ಮಾರಾಟಗಾರರು ಮಾರಾಟ ಮಾಡುವ ಆಹಾರ ಉತ್ಪನ್ನಗಳ ಮೇಲೆ ಯಾವುದೇ ಎಚ್ಚರಿಕೆ ಲೇಬಲ್‌ಗಳ ಕುರಿತು ಸೂಚನೆ ನೀಡಿಲ್ಲ ಮತ್ತು ಭಾರತೀಯ ತಿಂಡಿಗಳೆಡೆಗೆ ಪಕ್ಷಪಾತ ತೋರಿಲ್ಲ.

ಆದ್ದರಿಂದ ಈ ಹೇಳಿಕೆ ಸಂಪೂರ್ಣವಾಗಿ ತಪ್ಪು/ಸುಳ್ಳು.

ಇದನ್ನೂ ಓದಿ:

ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿಯವರ ಡೀಪ್‌ಫೇಕ್ ಕ್ಲಿಪ್ ವೈರಲ್; ಸತ್ಯ ಪರಿಶೀಲನೆ

ಕ್ಯಾನ್ಸರ್ ವಿರುದ್ಧ ವಿಟಮಿನ್ ಡಿ ಯು ಏಕೈಕ ಅತ್ಯಂತ ಪರಿಣಾಮಕಾರಿ ಔಷಧವೇ? ಸತ್ಯ ಪರಿಶೀಲನೆ

 

 

Leave a Reply

Your email address will not be published. Required fields are marked *

*