Don't Miss

ಆಸ್ಟ್ರೇಲಿಯದ ಅಪಘಾತಕ್ಕೀಡಾದ ರಾಕೆಟ್ ಇಸ್ರೋ ಎಂಜಿನ್ ಹೊಂದಿತ್ತೇ? ಸತ್ಯ ಪರಿಶೀಲನೆ

ಹೇಳಿಕೆ/Claim: 14 ಸೆಕೆಂಡುಗಳಲ್ಲಿ ಪತನಗೊಂಡ ಮೊದಲ ಆಸ್ಟ್ರೇಲಿಯಾ ನಿರ್ಮಿತ ಆರ್ಬಿಟಲ್ ರಾಕೆಟ್, ಎರಿಸ್, ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಒದಗಿಸಿದ ಎಂಜಿನ್ ಅನ್ನು ಬಳಸುತ್ತಿತ್ತು.

ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಈ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ ಮತ್ತು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ರಾಕೆಟ್ ಅನ್ನು ಸಂಪೂರ್ಣವಾಗಿ ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ನಿರ್ಮಿಸಿತ್ತು ಎಂದು ಹೇಳಲಾಗಿದೆ.

ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ–

***************************************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

****************************************************************

ಜುಲೈ 30, 2025 ರಂದು ಉಡಾವಣೆಯಾಗಿ ಸ್ವಲ್ಪವೇ ಸಮಯದ ನಂತರ ನೆಲಕ್ಕಪ್ಪಳಿಸಿದ ಆಸ್ಟ್ರೇಲಿಯಾದ ಎರಿಸ್ ರಾಕೆಟ್ ಎಂಬ ಮೊದಲ ಆರ್ಬಿಟಲ್ ರಾಕೆಟ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಯಾರಿಸಿದ ಎಂಜಿನ್‌ ಮೂಲಕ ಚಾಲಿತವಾಗಿತ್ತು ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹೇಳಿಕೆಯೊಂದು ಹೇಳಿದೆ.

ಈ ರಾಕೆಟ್ ಅನ್ನು ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ತಯಾರಿಸಿತ್ತು ಆದರೆ ಅಪಘಾತಕ್ಕೆ ಭಾರತೀಯ ನಿರ್ಮಿತ ಎಂಜಿನ್ ಕಾರಣ ಎಂದು ಈ ಹೇಳಿಕೆಯು ಸೂಚಿಸುತ್ತದೆ. ‘ಟ್ಯಾಕ್ಟಿಕಲ್ ಟ್ರಿಬನ್’ ಎಂಬ ಹ್ಯಾಂಡಲ್‌ನ X ಖಾತೆಯು ಇದನ್ನು ಹಂಚಿಕೊಂಡಿದ್ದು, ಆಸ್ಟ್ರೇಲಿಯಾದ ಉಪಗ್ರಹ ಉಡಾವಣೆಯಾದ 14 ಸೆಕೆಂಡುಗಳ ನಂತರ ವಿಫಲವಾಗಿದೆ ಮತ್ತು ರಾಕೆಟ್ ಇಸ್ರೋ ನಿರ್ಮಿತ ಎಂಜಿನ್ ಅನ್ನು ಹೊಂದಿತ್ತೆಂದು ಹೇಳಿದೆ. ಪೋಸ್ಟ್ ಅನ್ನು ಇಲ್ಲಿ ನೋಡಿ.

ಇತರ ಸಾಮಾಜಿಕ ಮಾಧ್ಯಮ ವಾಹಿನಿಗಳಲ್ಲಿಯೂ ಇದೇ ರೀತಿಯ ಹೇಳಿಕೆಗಳು ಕಂಡುಬಂದಿದ್ದು, ಕೆಲವರು ಮೋದಿ ಸರ್ಕಾರವನ್ನು ವೈಫಲ್ಯಕ್ಕೆ ದೂಷಿಸಿದ್ದಾರೆ. ಕೆಳಗಿನ ಸ್ಕ್ರೀನ್‌ಶಾಟ್ ನೋಡಿ.

ಸತ್ಯ ಪರಿಶೀಲನೆ:

ಡಿಜಿಟೈ ಇಂಡಿಯಾ ಈ ಹೇಳಿಕೆಯ ಕುರಿತು ತನಿಖೆ ನಡೆಸಿ ಘಟನೆಯ ಸುತ್ತಲಿನ ವಾಸ್ತವಾಂಶಗಳನ್ನು ಸ್ಪಷ್ಟಪಡಿಸಲು ಪುರಾವೆಗಳನ್ನು ಹುಡುಕಿತು. ಆಸ್ಟ್ರೇಲಿಯಾದ ಮೊದಲ ಆರ್ಬಿಟಲ್ ರಾಕೆಟ್ ಅನ್ನು ಜುಲೈ 30, 2025 ರಂದು ಉಡಾವಣೆ ಮಾಡಲಾಯಿತು ಆದರೆ ಅದು ಇಸ್ರೋ ನಿರ್ಮಿತ ಎಂಜಿನ್ ಅನ್ನು ಹೊಂದಿತ್ತೆಂದು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಮೂಲಗಳಿಲ್ಲ.

BBC ನ್ಯೂಸ್ ಅಪ್‌ಲೋಡ್ ಮಾಡಿದ ಉಡಾವಣಾ ವೀಡಿಯೊವನ್ನು ಇಲ್ಲಿ ನೋಡಿ.

ಅದಾಗ್ಯೂ, ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್‌ನೊಂದಿಗಿನ ಯಾವುದೇ ಸಹಯೋಗಕ್ಕೆ ಸಂಬಂಧಿಸಿದಂತೆ ಇಸ್ರೋದಿಂದ ಯಾವುದೇ ಅಧಿಕೃತ ವರದಿಗಳು ಅಥವಾ ಪ್ರಕಟಣೆಗಳು ಕಂಡುಬಂದಿಲ್ಲ.  ಆಸ್ಟ್ರೇಲಿಯಾದ 50 ವರ್ಷಗಳಿಗೂ ಹೆಚ್ಚು ಕಾಲದ ಮೊದಲ ಆರ್ಬಿಟಲ್ ಉಡಾವಣಾ ಪ್ರಯತ್ನವನ್ನು ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಎರಿಸ್ ರಾಕೆಟ್ ಗುರುತಿಸಿತು.

ಕ್ವೀನ್ಸ್‌ಲ್ಯಾಂಡ್‌ನ ಬೋವೆನ್ ಆರ್ಬಿಟಲ್ ಸ್ಪೇಸ್‌ಪೋರ್ಟ್‌ನಿಂದ ಉಡಾವಣೆಯಾದ 23 ಮೀಟರ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಯಿತಾದರೂ 14 ಸೆಕೆಂಡುಗಳ ನಂತರ ಭೂಮಿಗೆ ಅಪ್ಪಳಿಸಿತು.

ವೈಫಲ್ಯದ ಹೊರತಾಗಿಯೂ, ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಉಡಾವಣೆಯನ್ನು ಒಂದು ಮೈಲಿಗಲ್ಲು ಎನ್ನುತ್ತಾ, ರಾಕೆಟ್‌ನ ನಾಲ್ಕು ಹೈಬ್ರಿಡ್-ಪ್ರೊಪೆಲ್ಡ್ ಎಂಜಿನ್‌ಗಳು 23 ಸೆಕೆಂಡುಗಳ ಕಾಲ ಉರಿಯುತ್ತಿದ್ದವು ಮತ್ತಿದು ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ಮಾಹಿತಿಯನ್ನು ಒದಗಿಸುತ್ತದೆ ಎಂಬ ಅಂಶದ ಮೇಲೆ ಒತ್ತು ಕೊಟ್ಟಿತು. ದಿ ಆಸ್ಟ್ರೇಲಿಯಾ ಟುಡೇ ಈ “ಬಲಿಷ್ಠ ಫಲಿತಾಂಶ”ವನ್ನು ತಮ್ಮ ಟ್ವೀಟ್‌ನಲ್ಲಿ ಎತ್ತಿ ತೋರಿಸುತ್ತದೆ, ಟ್ವೀಟನ್ನು ಇಲ್ಲಿ ಕಾಣಬಹುದು.

AP ನ್ಯೂಸ್ ಮತ್ತು ದ ಗಾರ್ಡಿಯನ್ ಮಾಡಿದ ವರದಿ ಸೇರಿದಂತೆ ವಿಶ್ವಾಸಾರ್ಹ ಮಾಧ್ಯಮಗಳು, ಗೋಲ್ಡ್ ಕೋಸ್ಟ್ ಮೂಲದ ಆಸ್ಟ್ರೇಲಿಯನ್ ಕಂಪನಿಯಾದ ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಈ ರಾಕೆಟ್ ಅನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಿ ನಿರ್ಮಿಸಿದೆ ಎಂದು ಪ್ರತಿಪಾದಿಸಿವೆ.

ಇದಲ್ಲದೆ, ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್‌ನ CEO ಆಡಮ್ ಗಿಲ್ಮೋರ್ ರವರ ನುಡಿಗಳನ್ನೊಳಗೊಂಡ ಹೇಳಿಕೆಗಳೂ ನಮಗೆ ದೊರೆತಿವೆ. ಅದರಲ್ಲಿ ಆತ ರಾಕೆಟ್‌ನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವುದನ್ನು ಒತ್ತಿ ಹೇಳಿದ್ದು, ಇಸ್ರೋ ಬಿಡಿ ಯಾವುದೇ ವಿದೇಶಿ ಘಟಕಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಲಿಲ್ಲ.

“ಆರ್ಬಿಟಲ್-ಕ್ಲಾಸ್ ರಾಕೆಟ್ ಅನ್ನು ಸಂಪೂರ್ಣವಾಗಿ ಆಸ್ಟ್ರೇಲಿಯಾದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ” ಮತ್ತು “ಎರಿಸ್ ಅನ್ನು ಬಹುತೇಕ ಸಂಪೂರ್ಣವಾಗಿ ಆಂತರಿಕವಾಗಿ ಅಭಿವೃದ್ಧಿಪಡಿಸಲಾಗಿದೆ” ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ಸ್ಪಷ್ಟವಾಗಿ ಹೇಳುತ್ತದೆ.

ಹೀಗಾಗಿ, ಎರಿಸ್ ರಾಕೆಟ್ ಇಸ್ರೋ ನಿರ್ಮಿತ ಎಂಜಿನ್ ಅನ್ನು ಹೊಂದಿದೆ ಎಂಬ ಹೇಳಿಕೆ ಸುಳ್ಳು, ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಮೂಲಗಳು ಅಥವಾ ಅಧಿಕೃತ ಹೇಳಿಕೆಗಳಿಲ್ಲ. ರಾಕೆಟ್ ಸಂಪೂರ್ಣವಾಗಿ ಆಸ್ಟ್ರೇಲಿಯಾದ ಪ್ರಯತ್ನವಾಗಿದ್ದು ಇಸ್ರೋ ಜೊತೆ ಯಾವುದೇ ಸಹಯೋಗವಿಲ್ಲ.

 

Leave a Reply

Your email address will not be published. Required fields are marked *

*