Don't Miss

ಭಾರತವು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯಿಂದ ಜಿಪಿಎಸ್ ಆಧಾರಿತ ಟೋಲ್ ಕಡಿತಕ್ಕೆ ಮಾರ್ಪಾಡು ಮಾಡಲಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದಲ್ಲಿ ಮೇ 1, 2025 ರಿಂದ ಫಾಸ್ಟ್‌ಟ್ಯಾಗ್ ನಿಂದ GPS-ಆಧಾರಿತ ಟೋಲ್‌ಗಳಿಗೆ ಮಾರ್ಪಾಡಾಗಲಿದೆ.

ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. GPS-ಆಧಾರಿತ ವ್ಯವಸ್ಥೆಯ ವಿಷಯವು ಪರಿಗಣನೆಯಲ್ಲಿದೆಯಾದರೂ, ಮೇ 1, 2025 ರಿಂದ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಬದಲಾಯಿಸಲು NHAI ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ–

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪಾವತಿಸಲು ಕಷ್ಟದಾಯಕವಾಗಿರುವ ಮತ್ತು ಅಸ್ಥಿರವೆಂದು ಆರೋಪಿಸಲಾದ ಫಾಸ್ಟ್‌ಟ್ಯಾಗ್ ವ್ಯವಸ್ಥೆಯ ಬದಲಿಯಾಗಿ ಸ್ಯಾಟಲೈಟ್-ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬೆಂಬಲಿಸುವ ಹಲವಾರು ಹೇಳಿಕೆಗಳು ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿವೆ. ಈ ಹೊಸ ವ್ಯವಸ್ಥೆಯನ್ನು ಮೇ 1, 2025 ರಿಂದ ಜಾರಿಗೆ ತರಲಾಗುವುದು ಎಂಬ ಹೇಳಿಕೆ ಇದ್ದದ್ದರಿಂದ ಈ ವ್ಯವಸ್ಥೆಗೆ ದೊರಕಿದ ಬೆಂಬಲವು ಅನೇಕ ಬಳಕೆದಾರರ ಗಮನವನ್ನು ಸೆಳೆಯಿತು.

ಹೇಳಿಕೆಗಳನ್ನು ಇಲ್ಲಿ ನೋಡಿ. ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ: “ಮೇ 1 ರಿಂದ ಫಾಸ್ಟ್‌ಟ್ಯಾಗ್ ಇಲ್ಲ? ಭಾರತವು ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಪ್ರಾರಂಭಿಸಲಿದೆ.” ಮತ್ತೊಬ್ಬರು ಹೀಗೆ ಬರೆದರು: “ಭಾರತವು ಮೇ 1, 2025 ರಿಂದ ಫಾಸ್ಟ್‌ಟ್ಯಾಗ್‌ನಿಂದ ಜಿಪಿಎಸ್ ಆಧಾರಿತ ಟೋಲ್‌ಗಳಿಗೆ ಮಾರ್ಪಾಡಾಗಲಿದೆ, ನೀವು ಓಡಿಸುವ ಕಿಲೊಮೀಟರುಗಳಿಗೆ ಮಾತ್ರ ಹಣ ಪಾವತಿಸಿ. ಇನ್ನು ಕಾಯುವ ಅಗತ್ಯವಿಲ್ಲ, ಸ್ಕ್ಯಾನಿಂಗ್ ಅಗತ್ಯವಿಲ್ಲ. NavIC GPS ಮೂಲಕ ನೈಜ-ಸಮಯದ ಟ್ರ್ಯಾಕಿಂಗ್.”

 

FACT-CHECK

ಈ ಹೇಳಿಕೆ ವೈರಲ್ ಆಗಿದ್ದು, ಒಂದು ತಿಂಗಳೊಳಗೆ ಇದನ್ನು ಪರಿಚಯಿಸಲಾಗುವುದು ಎಂಬ ತುರ್ತು ಸೂಚನೆಯನ್ನು ಹೊಂದಿದ್ದ ಕಾರಣ, ಅನೇಕ ಜನರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾರಂಭಿಸಿದರು. ಡಿಜಿಟೈ ಇಂಡಿಯಾ ದೃಢೀಕರಣ ಪರಿಶೀಲನೆಗಾಗಿ ವಿನಂತಿಯನ್ನು ಸ್ವೀಕರಿಸಿದಾಗ, ನಾವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಅಧಿಕೃತ ಹೇಳಿಕೆಯನ್ನು ಹುಡುಕಿದೆವು.

ವಾಸ್ತವವಾಗಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಏಪ್ರಿಲ್ 14, 2025 ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ್ದರು.

ಆತ ಹೇಳಿದ್ದು ಹೀಗೆ, “ಯಾರೂ ನಿಮ್ಮನ್ನು ತಡೆಯುವುದಿಲ್ಲ. ಕ್ಯಾಮೆರಾ ನಿಮ್ಮ ನಂಬರ್ ಪ್ಲೇಟ್‌ನ ಫೋಟೋಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಿಮ್ಮ ಬ್ಯಾಂಕ್ ಖಾತೆಗಳಿಂದ ನಿಖರವಾದ ಟೋಲ್ ಅನ್ನು ತೆಗೆದುಕೊಳ್ಳಲಾಗುತ್ತದೆ.”

ಆದರೆ ಗೂಗಲ್‌ನಲ್ಲಿ ತ್ವರಿತ ಹುಡುಕಾಟ ನಡೆಸಿದಾಗ ಈ ಯೋಚನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹಲವಾರು ಪೋಸ್ಟ್‌ಗಳಲ್ಲಿ ಹೇಳಿರುವಂತೆ ಮೇ 1, 2025 ರಿಂದ ಖಂಡಿತವಾಗಿಯೂ ಇದನ್ನು ಕಾರ್ಯಗತಗೊಳಿಸಲಾಗುವುದಿಲ್ಲ ಎಂದು ತಿಳಿದುಬಂತು.

ಈ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ತಳ್ಳಿಹಾಕಲು, ಪತ್ರಿಕಾ ಮಾಹಿತಿ ಬ್ಯೂರೋ (PIB) ವೈರಲ್ ಹೇಳಿಕೆ ಸುಳ್ಳೆಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 18, 2025 ರಂದು “ಮೇ 1, 2025 ರಿಂದ ಉಪಗ್ರಹ ಆಧಾರಿತ ಟೋಲಿಂಗ್ ವ್ಯವಸ್ಥೆಯ ಪ್ರಾರಂಭದ ಕುರಿತು ಸ್ಪಷ್ಟೀಕರಣ” ಎಂಬ ಶೀರ್ಷಿಕೆಯ ಪ್ರಕಟಣೆಯಲ್ಲಿ, ಮೇ 1, 2025 ರಿಂದ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲಿಂಗ್ ಅನ್ನು ಅನುಷ್ಠಾನಗೊಳಿಸುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಥವಾ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ಗಳು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

“ಟೋಲ್ ಪ್ಲಾಜಾಗಳ ಮೂಲಕ ವಾಹನಗಳ ತಡೆಕಂಬ-ರಹಿತ ಚಲನೆಯನ್ನು ಸುಗಮಗೊಳಿಸಲು ಮತ್ತು ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲು ‘ANPR-FASTag-ಆಧಾರಿತ ತಡೆಕಂಬ-ರಹಿತ ಟೋಲಿಂಗ್ ವ್ಯವಸ್ಥೆ’ಯನ್ನು ಆಯ್ದ ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ತರಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. “ಈ ವ್ಯವಸ್ಥೆಯೆಡೆಗೆ ಬಳಕೆದಾರರ ಪ್ರತಿಕ್ರಿಯೆ ಕಾರ್ಯಕ್ಷಮತೆ, ಮತ್ತು ದಕ್ಷತೆಯ ಆಧಾರದ ಮೇಲೆ, ದೇಶಾದ್ಯಂತ ಅದರ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಲಾಗಿದೆ.

ಆದ್ದರಿಂದ, ದೇಶಾದ್ಯಂತ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ದಿನಾಂಕ ಮೇ 1, 2025 ಎಂಬುದರ ಬಗೆಗಿನ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*